ಜಿಲ್ಲೆ

ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ: ಕೆ.ಸತೀಶ್ ಅಭಿನಂದನೆ

ರಾಮನಗರ: ರಾಜ್ಯ ಸರ್ಕಾರಿ ನೌಕರರು, ಅವರ ಕುಟುಂಬದ ಅವಲಂಬಿತರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಇದೇ ಅಕ್ಟೋಬರ್ 01 ರಿಂದ ಜಾರಿಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.

ನೌಕರ ಸಮುದಾಯದ ಬಹುದಿನಗಳ ಬೇಡಿಕೆಯಂತೆ ಈ ಯೋಜನೆ ಜಾರಿಯಿಂದಾಗಿ 5.25 ಲಕ್ಷ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸೇರಿ ಸುಮಾರು 25ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ.  ಯೋಜನೆ ಜಾರಿಗೆ ಸರ್ಕಾರ ವಾರ್ಷಿಕ 500 ಕೋಟಿ ರೂ. ಅನುದಾನ ಮೀಸಲಿಟ್ಟಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಈ ಯೋಜನೆಯನ್ನು ನಿರ್ವಹಣೆ ಮಾಡಲಾಗುತ್ತದೆ.  ಯೋಜನೆ ಸೌಲಭ್ಯ ಪಡೆಯಲು ಸರ್ಕಾರಿ ಅಧಿಕಾರಿ/ ನೌಕರರು ಪ್ರತಿ ತಿಂಗಳು ನಿಗದಿ ಪಡಿಸಿದ ವಂತಿಗೆಯನ್ನು ಅಕ್ಟೋಬರ್ ತಿಂಗಳಿಂದಲೇ ಪಾವತಿಸಬೇಕಿದೆ.  ಮಾಸಿಕ ವಂತಿಗೆ ನೀಡಲು ಇಚ್ಛಿಸದವರು ಅಕ್ಟೋಬರ್ 18 ರೊಳಗೆ ಸಂಬಂಧಿತ ಬಟವಾಡೆ ಅಧಿಕಾರಿಗೆ (ಡಿಡಿಒ) ಲಿಖಿತವಾಗಿ ತಿಳಿಸಬೇಕು ಎಂದು ಸೂಚಿಸಲಾಗಿದೆ.

ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವಂತಿಗೆ ನೀಡಬೇಕಿದೆ.  ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಾರೆ, ಅವರ ಮಾಸಿಕ ಆದಾಯ ಮಿತಿಯನ್ನು ಪರಿಷ್ಕರಿಸಿ 17 ಸಾವಿರ ರೂ.ಗಳಿಂದ 27 ಸಾವಿರಕ್ಕೆ ನಿಗಧಿ ಪಡಿಸಲಾಗಿದೆ.  ವಿವಾಹಿತ ಮಹಿಳಾ ನೌಕರರ ತಂದೆ-ತಾಯಿ ಇಬ್ಬರೂ ಈ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ.  ಈ ಯೋಜನೆ ಜಾರಿಗೆ ಬಂದ ದಿನದಿಂದ ಸದ್ಯ ಜಾರಿಯಲ್ಲಿರುವ “ಜ್ಯೋತಿ ಸಂಜೀವಿನಿ” ಯೋಜನೆ ಸ್ಥಗಿತಗೊಳ್ಳಲಿದೆ.

ಸಂಘದಿಂದ ಧನ್ಯವಾದ: ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮ್ಯಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ ಕೆ.ಸತೀಶ್ ಧನ್ಯವಾದ ಸಲ್ಲಿಸಿದ್ದಾರೆ.