ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಎಎಪಿ ಮುಖಂಡ ನಾರಾಜ ಹೊಂಗಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಸಂಗಮೇಶ, ಸಹನಾ ಅಂಗಡಿ ಇದ್ದರು. 
ಜಿಲ್ಲೆ

ಅವ್ಯವಸ್ಥೆ ಸರಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಆಗಮಿಸಿ ಊಟ ಮಾಡಬೇಕೆಂಬ ರಾಜ್ಯ ಸರ್ಕಾರದ ನಿಯಮ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಹಳೇ ವ್ಯವಸ್ಥೆಯಂತೆ ಮನೆ ಮನಗೆ ತಲುಪಿಸುವ ಕೆಲಸವಾಗಬೇಕು ಎಂದು ಎಎಪಿ ಮುಖಂಡ ನಾರಾಜ ಹೊಂಗಲ್ ಆಗ್ರಹಿಸಿದರು.


ಸರ್ಕಾರದ ಇಂತಹ ಅವ್ಯವಸ್ಥೆಗಳಿಂದ ಗರ್ಭಿಣಿಯರು, ಬಾಣಂತಿಯರು ಕಷ್ಟ ಅನುಭವಿಸುವಂತಾಗಿದೆ. ಅವರು ಹೇಗೆ ಅಂಗನವಾಡಿ ಕೇಂದ್ರಗಳಿಗೆ ಹೋಗಲು ಸಾಧ್ಯ ಎಂದು ಪ್ರಶ್ನಿಸಿ ಕೂಡಲೇ ಇದನ್ನು ಸರಿಪಡಿಸಬೇಕು? ಇಲ್ಲದಿದ್ದರೆ ರಾಜ್ಯಾದ್ಯಂತ ಎಎಪಿ ಪಕ್ಷದ ಹೋರಾಟ ನಡೆಸಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.


ಬಾಣಂತಿಯರು ಮೂರು ತಿಂಗಳು ಮನೆಯ ಕೋಣೆ ಬಿಟ್ಟು ಬರುವಂತಿರುವುದಿಲ್ಲ. ಅಂಥದರಲ್ಲಿ ಸರ್ಕಾರ ಅಂಗನವಾಡಿ ಕೇಂದ್ರಗಳಿಗೆ ಆಗಮಿಸಿ ಊಟ ಮಾಡುವಂತೆ ಹೇಳುತ್ತಿರುವದು ದುರದೃಷ್ಟಕರ, ಅನೇಕರು ಆಗಮಿಸದಿದ್ದರೂ ಊಟ ನೀಡಿರುವುದಾಗಿ ಹಾಜರಾತಿ ತೋರಿಸಲಾಗುತ್ತಿದೆ. ಅಲ್ಲದೇ ನಿರ್ಧಿಷ್ಟ ಗುರಿ ನೀಡಿರುತ್ತಾರೆ, ಇಲ್ಲಸಲ್ಲದ ಅಂಕಿ ಸಂಖ್ಯೆಗಳನ್ನು ತುಂಬಿ ಗುರಿ ತಲುಪಿಸುವ ತವಕದಲ್ಲಿ ಅಧಿಕಾರಿಗಳು ಇರುತ್ತಾರೆ, ಹೀಗಾದರೆ ಮಾತೃಪೂರ್ಣ ಯೋಜನೆ ಹೇಗೆ ಯಶಸ್ವಿಯಾಗುತ್ತದೆ ಎಂದು ಪ್ರಶ್ನಿಸಿದ ಹೊಂಗಲ್ ಅವರು ಕೂಡಲೇ ಈ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.


ಯೋಜನೆ ಆರಂಭದಲ್ಲಿ ಅವರ ಮನೆಗಳಿಗೆ ಆಹಾರಧಾನ್ಯ ಪೂರೈಸಲಾಗಿತ್ತಿತ್ತು. ನಂತರ ಬದಲಾಯಿಸಿ ಅಂಗನವಾಡಿ ಕೇಂದ್ರಗಳಿಗೆ ಬಂದು ಊಟ ಮಾಡಬೇಕು ಎಂದು ಮಾಡಲಾಗಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿ ಪಕ್ಷ ಭೇದ ಮರೆತು ಮನೆಗೆ ತಲುಪಿಸಬೇಕು ಎಂದು ಆಗ್ರಹಿಸಿದ್ದರು. ಸಚಿವ ಹಾಲಪ್ಪ ಆಚಾರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಸಿಲ್ಲ ಎಂದು ದೂರಿದರು.


ಇನ್ನು ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆಗೆ ಹೋಗಿ ಊಟಕ್ಕೆ ಕರೆಯುವಂತಾಗಿದೆ. ಇದರಿಂದ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಈಗಾಗಲೇ ಮಲೆನಾಡು ಪ್ರದೇಶದಲ್ಲಿ ಮನೆಗೆ ಆಹಾರಧಾನ್ಯಗಳನ್ನು ತಲುಪಿಸಬೇಕು ಎಂದು ಆದೇಶಿಸಿದೆ. ಅದನ್ನು ರಾಜ್ಯದಾದ್ಯಂತ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸಂಗಮೇಶ, ಸಹನಾ ಅಂಗಡಿ ಇದ್ದರು.