ಜಿಲ್ಲೆ

ಬಿಜೆಪಿ 400 ಮುಟ್ಟುವುದರಿರಲಿ, 200 ತಲುಪುವುದು ಕಷ್ಟ: ಆಪ್ ರಾಜ್ಯ ಉಪಾಧ್ಯಕ್ಷ ಡಾ.ರಮೇಶ್ ಬೆಲ್ಲಂಕೊಂಡ ಭವಿಷ್ಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರಸಕ್ತ ಲೋಕಸಭಾ ಚುನಾವಣೆ ಪ್ರಜಾತಂತ್ರ ವ್ಯವಸ್ಥೆಯಡಿ ಇರಬೇಕಾ, ಸರ್ವಾಧಿಕಾರಕ್ಕೆ ಒಳಗಾಗಬೇಕಾ ಎಂಬುದನ್ನು ನಿರ್ಧರಿಸುವ ಚುನಾವಣೆಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ರಮೇಶ್ ಬೆಲ್ಲಂಕೊಂಡ ತಿಳಿಸಿದರು.

ದೇಶ ಅವನತಿಯ ಅಂಚಿಗೆ ಬಂದು ನಿಂತಿದ್ದು, ಇದರಿಂದ ದೇಶವನ್ನು ಸಂರಕ್ಷಿಸಿಕೊಳ್ಳುವ ಸಂಕಲ್ಪ ಜಾಥಾ ಪ್ರಾರಂಭವಾಗಿದೆ. ಸಂವಿಧಾನ ವಿರೋಧಿ, ಧರ್ಮಾಂಧ ಬಿಜೆಪಿಯನ್ನು ಸೋಲಿಸುವುದು, ಬಣ್ಣ ಬಣ್ಣದ ಕನಸುಗಳ ಮಹಾಪೂರ ಹರಿಸಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ತನ್ನ ನಿಜ ಬಣ್ಣವನ್ನು ತೋರಿಸಿಕೊಂಡಿದೆ. ದೇಶದ ಪರಿಸ್ಥಿತಿಯನ್ನು ಅಧೋಗತಿಗೆ ತಂದಿಟ್ಟಿದೆ. ಜನಸಾಮಾನ್ಯರ ಬದುಕನ್ನು ಪಾತಾಳಕ್ಕೆ ತುಳಿದಿದೆ. ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ, ಭ್ರಷ್ಟಾಚಾರ, ಕಂಪನಿಗಳಲೂಟಿ, ಸಾಮಾನ್ಯರ ಸುಲಿಗೆ, ಕರ್ನಾಟಕಕ್ಕೆ ಅನ್ಯಾಯ, ಹೆಚ್ಚಿರುವ ಹಿಂಸೆ, ದಮನ, ದೌರ್ಜನ್ಯ ಧಾರ್ಮಿಕ ದೇಷ ಇವೆಲ್ಲವೂ ಈ ಸರ್ಕಾರದ ಬಳುವಳಿಗಳಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬರಲು ಬೇಕಾದ ಸಾಧನೆ ಮಾಡದೆ ಜಾತಿ, ಜಾತಿಗಳ ನಡುವೆ ಜಗಳ ಹಚ್ಚುವ, ಧರ್ಮ ಧರ್ಮಗಳ ನಡುವೆ ದ್ವೇಷ ಬೆಳೆಸುವ, ದೇಶವನ್ನು ಭಾವೋದ್ರೇಕಗೊಳಿಸಿ ಮತಗಳನ್ನು ಕಬಳಿಸುವ ತಂತ್ರಗಾರಿಕೆಯ ಮಾರ್ಗಗಳನ್ನು ಹುಡುಕುತ್ತಿದೆ. ಈ ಚುನಾವಣೆಯ ಮುನ್ನ ಪುಲ್ವಾಮದಂತಹ ಮತ್ತೊಂದು ನೀಚ ಷಡ್ಯಂತ್ರ ರೂಪಿಸುವ ಎಲ್ಲಾ ಸಾಧ್ಯತೆಗಳೂ ಇವೆ. ನಾಗರೀಕರಾಗಿ ನಾವು ಜಾಗೃತರಾಗಬೇಕಿದೆ. ಜನರನ್ನೂ ಜಾಗೃತಗೊಳಿಸಬೇಕಿದೆ. ಬಿಜೆಪಿ 400 ಮುಟ್ಟುವುದಿರಲಿ, 200 ತಲುಪುವುದೂ ಕಷ್ಟವಿದೆ. ಜನಸಾಮಾನ್ಯರನ್ನು ಸಂಕಷ್ಟಗಳ ಕೂಪಕ್ಕೆ ತಳ್ಳಿರುವ ಬಿಜೆಪಿಗೆ ಜನ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಮುಖಂಡರಾದ ಎ.ಎಲ್. ಕೆಂಪೂಗೌಡ, ಆರ್. ನಾಗೇಶ್, ಬಿ.ಟಿ. ವಿಶ್ವನಾಥ್, ಗುರುಪ್ರಸಾದ್ ಕೆರಗೋಡು, ಕೃಷ್ಣೇಗೌಡ, ಪೂರ್ಣಿಮಾ, ಸಿದ್ದರಾಜು ಗೋಷ್ಠಿಯಲ್ಲಿದ್ದರು.