ಬೂದಿಕೋಟೆ: ಬೂದಿಕೋಟೆ ಗಡಿಭಾಗದ ಚಿಗರಲೂರು ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಕಾಡಾನೆ ದಾಳಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೈತ ಬೀರಪ್ಪ (55) ಚಿಕಿತ್ಸೆ ಫಲಕಾರಿಯಾಗದೆ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿಯ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟ ಮಾಡುತ್ತಿದೆ. ಭಾನುವಾರ ಬೆಳಗ್ಗೆ ಜಮೀನಿನಲ್ಲಿ ರೇಷ್ಮೆ ಸೊಪ್ಪಿಗಾಗಿ ಬೀರಪ್ಪ ಮತ್ತು ಅವರ ಮಗಳು ಹೋಗುತ್ತಿದ್ದಾಗ ಒಂಟಿ ಆನೆ ಅಡ್ಡ ಬಂದಿದೆ. ಆನೆ ನೋಡಿದ ಅಪ್ಪ ಮಗಳಿಬ್ಬರೂ ಓಡಲಾರಂಭಿಸಿದರು. ಬೀರಪ್ಪ ಅವರ ಮಗಳು ತಪ್ಪಿಸಿಕೊಂಡಿದ್ದು, ಬೀರಪ್ಪ ಆನೆ ದಾಳಿಗೆ ತುತ್ತಾಗಿ ತೀವ್ರವಾಗಿ ದಾಳಿ ಮಾಡಿದ್ದರಿಂದ ಮೃತಪಟ್ಟಿದ್ದಾರೆ.
ತಿಂಗಳಲ್ಲಿ ಆನೆ ದಾಳಿಗೆ ಇದು ಮೂರನೇ ಸಾವಾಗಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಹೀಗಾಗುತ್ತಿದೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ. 30ಕ್ಕೂ ಹೆಚ್ಚು ಆನೆಗಳ ಗುಂಪು ರಾತ್ರಿ ಬೆಳೆ ನಾಶ ಮಾಡುತ್ತಿದ್ದವು. ಈಗ ಕಾಡಿನಂಚಿನ ಗ್ರಾಮಗಳಿಗೆ ನುಗ್ಗುತ್ತಿದ್ದು, ರೈತರು ಒಂಟಿಯಾಗಿ ಓಡಾಡುವುದಕ್ಕೂ ಭಯಪಡುತ್ತಿದ್ದಾರೆ.
ಹೋಬಳಿಯಲ್ಲಿ ಆನೆ ಹಾವಳಿ ವಿಪರೀತವಾಗಿದ್ದರೂ ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ. ಯಾವುದೇ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಆದ್ದರಿಂದ ರೈತರ ಸಂಕಷ್ಟ ದಿನೇ-ದಿನೇ ಜಾಸ್ತಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟದ ಎಚ್ಚರಿಕೆ ನೀಡಿದ ಶಾಸಕ: ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಗ್ರಾಮಕ್ಕೆ ಭೇಟಿ ನೀಡಿ ಮೃತನ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್‌ಗೆ ಫೋನ್‌ನಲ್ಲಿ ಘಟನೆ ವಿವರಿಸಿದರು. ಸರ್ಕಾರದಿಂದ ಇನ್ನೂ ಹೆಚ್ಚು ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಬಂಗಾರಪೇಟೆ ಗಡಿಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿರುವುದರಿಂದ ಇದಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಆನೆ ಓಡಿಸಲು ಸ್ಥಳೀಯರಿಗೆ ತರಬೇತಿ: ಕಾಡಾನೆಗಳಿಂದ ಯಾವುದೇ ತೊಂದರೆಯಾಗದಂತೆ ಸುಲಭವಾಗಿ ಓಡಿಸುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಸ್ಥಳೀಯ ರೈತರಿಗೆ ತರಬೇತಿ ನೀಡಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಅನೇಕ ಕಡೆ ತರಬೇತಿ ಪಡೆದ ಸ್ಥಳೀಯ ರೈತರೇ ಆನೆ ಓಡಿಸಿದ ಉದಾಹರಣೆ ಇದೆ. ಅದೇ ರೀತಿ ಈ ಭಾಗದಲ್ಲೂ ಕಾಡಾನೆ ಓಡಿಸುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಸ್ಥಳೀಯ ರೈತರಿಗೆ ತರಬೇತಿ ನೀಡಲಾಗುವುದು. ಈ ಸಂಬಂಧ ಅರಣ್ಯ ಇಲಾಖೆ ಮೇಲಧಿಕಾರಿ ಪುಟ್ಟಸ್ವಾಮಿ ಜತೆ ಶನಿವಾರ ಚರ್ಚಿಸಿದ್ದೆ, ಕಾಡಾನೆಗಳನ್ನು ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲೆಯ ಗಡಿ ಭಾಗದಲ್ಲಿ ಪ್ರತಿ ವರ್ಷವೂ ಕಾಡಾನೆಗಳ ಹಾವಳಿ ಮುಂದುವರಿದಿದೆ. ಕೆಲ ದಿನಗಳ ಹಿಂದಷ್ಟೇ ಆನೆ ದಾಳಿಗೆ ಇಬ್ಬರು ಮೃತಪಟ್ಟಿದ್ದರು. ಈಗ ಮತ್ತೊಬ್ಬರು ಮೃತಪಟ್ಟಿದ್ದಾರೆ. ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಇಚ್ಛಾಶಕ್ತಿ ಕೊರತೆ ಇದೆ, ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ವಹಿಸಬೇಕು. ಈ ಬಗ್ಗೆ ಅರಣ್ಯ ಸಚಿವ ಆನಂದ್‌ಸಿಂಗ್ ಗಮನಕ್ಕೆ ತಂದಾಗ ಖುದ್ದಾಗಿ ಕ್ರಮ ವಹಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮೃತನ ಕುಟುಂಬಕ್ಕೆ ಪರಿಹಾರ: ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಆನೆ ದಾಳಿಗೆ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಾಡಾನೆಗಳ ಹಾವಳಿಗೆ ಸೂಕ್ತ ಪರಿಹಾರ ಸೂಚಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಂಸದ ಎಸ್.ಮುನಿಸ್ವಾಮಿ ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮೃತ ರೈತನ ಕುಟುಂಬಕ್ಕೆ ಸಾಂತ್ವಾನ ಹೇಳಿ ಬೀರಪ್ಪ ಪತ್ನಿ ಸಿದ್ದಮ್ಮಗೆ ಸ್ಥಳದಲ್ಲೆ 50 ಸಾವಿರ ರೂ. ನೆರವು ನೀಡಿದರು.
ಆನೆ ದಾಳಿಯಿಂದ ಮೃತರಾದ ಕುಟುಂಬಕ್ಕೆ ಇಲಾಖೆಯಿಂದ 7.5 ಲಕ್ಷ ರೂ.ಪರಿಹಾರ ನೀಡಲಾಗುವುದು. ಒಂಟಿ ಆನೆ ಹಿಡಿಯಲು ಬನ್ನೇರಘಟ್ಟದಿಂದ ಮತ್ತೆರಡು ಆನೆಗಳನ್ನು ಕರೆತಂದು ಕಾರ್ಯಚರಣೆ ಮಾಡಲಾಗುವುದು.
ಸುಧಾಕರ್, ಆರ್‌ಎ್ಒ, ಮಾಲೂರು