ವಿಜಯಪುರ: ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಮತ್ತು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಒತ್ತಾಯಿಸಿ ಆಮ್‌ಆದ್ಮಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ ಕಾರ್ಯಕರ್ತರು ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಮಾತನಾಡಿ, 2012 ರಲ್ಲಿ ಧರ್ಮಸ್ಥಳದಲ್ಲಿ ಕ್ರೂರವಾಗಿ ಅತ್ಯಾಚಾರ ಮತ್ತು ಕೊಲೆಗೆ ಒಳಗಾದ 17 ವರ್ಷದ ವಿದ್ಯಾರ್ಥಿನಿಯ ಕುಟುಂಬಸ್ಥರು 13 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ, ಈವರೆಗೂ ಅಪರಾಧಿಗಳು ಸಿಕ್ಕಿಲ್ಲ. ಹೀಗಾಗಿ ಮರುತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದರು.
ನಿಜವಾದ ಅಪರಾಧಿಗಳನ್ನು ಗುರುತಿಸುವಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ಹೊಸ ದೃಷ್ಟಿಕೋನದಿಂದ ಪ್ರಕರಣವನ್ನು ಮರುತನಿಖೆ ಮಾಡಲು ಹಿರಿಯ ಮತ್ತು ನಿಷ್ಪಕ್ಷಪಾತ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಬೇಕು. ಸಾಕ್ಷೃ ನಾಶ ಮತ್ತು ತನಿಖೆಯ ದುರುಪಯೋಗಕ್ಕೆ ಕಾರಣರಾದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಸಾಕ್ಷಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಸಾಕ್ಷಿ ಹೇಳುವವರಿಗೆ ಸುರಕ್ಷತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಬು ಬಿಜಾಪುರ, ಅವಿನಾಶ ಐಹೊಳೆ, ಸಂಜು ಶೆಟಗಾರ, ಮೀರಾಸಾಬ್ ತೊದಲಬಾಗಿ, ಬಸವರಾಜ ಖಾನಾಪುರ, ಆಮೀರ್ ಸೊಹೈಲ್ ಪಟೇಲ್, ಮೀರಾಸಾಬ್ ದಳವಾಯಿ, ರಮೇಶ ದೊಡ್ಡಮನಿ, ಪೀರಸಾಬ್ ವಾಲಿಕಾರ, ಮೇಹಬೂಬ್ ಗೋರಿ ಮತ್ತಿತರರಿದ್ದರು.