ಆಲೂರು: ಜಮೀನುಗಳ ಅಕ್ರಮ ಕಬಳಿಕೆ, ಆಸ್ತಿ ನಕಲು ತಪ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜು.31ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಹಸೀಲ್ದಾರ್ ಸಿ.ಪಿ.ನಂದಕುಮಾರ್ ತಿಳಿಸಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕೃಷಿ ಭೂಮಿ ಅಕ್ರಮ ಪ್ರಕರಣಗಳು, ನೋಂದಣಿಗಳು ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ರೈತರಿಗೆ ತಮ್ಮ ಪಹಣಿಗೆ ಆಧಾರ್ ಲಿಂಕ್ ಮಾಡಿಸಲು ಅವಕಾಶ ಕಲ್ಪಿಸಿತ್ತು. ಇದರಿಂದ ಆಸ್ತಿ ಇತರರ ಪಾಲಾಗುವುದನ್ನು ತಪ್ಪಿಸಬಹುದು. ಸರ್ಕಾರಿ ಸೌಲಭ್ಯಗಳು, ಕೃಷಿ ಇಲಾಖೆ ಸೌಲಭ್ಯಗಳು ಮತ್ತು ಬೆಳೆ ಪರಿಹಾರಗಳನ್ನು ಪಡೆಯಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರು ಜು.31ರೊಳಗೆ ತಮ್ಮ ಜಮೀನಿಗಳ ಎಲ್ಲ ಸರ್ವೇ ನಂಬರಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ಫೋನ್‌ನೊಂದಿಗೆ ಲೆಕ್ಕಾಧಿಕಾರಿ ಇಲ್ಲವಾದಲ್ಲಿ ನಾಡಕಚೇರಿಗೆ ಭೇಟಿ ನೀಡಿ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಿ ಎಂದು ತಿಳಿಸಿದರು.