ಒಂದು ವರ್ಷದಿಂದ ಖಾಲಿ ಇರುವ ಆಧಾರ್​ ನೋಂದಣಿ ಕೇಂದ್ರ. 
ಜಿಲ್ಲೆ

ಆಧಾರ್​ ಕೇಂದ್ರವಿಲ್ಲದೆ ಅಲೆಯುವ ಸ್ಥಿತಿ

ಎನ್.ವೆಂಕಟೇಶ್

ಎನ್​.ವಿ. ವೆಂಕಟೇಶ ಗುಡಿಬಂಡೆ

ತಾಲೂಕು ಕೇಂದ್ರದಲ್ಲಿ ಸಾರ್ವಜನಿಕರಿಗೆ ಕನಿಷ್ಠ ಅಗತ್ಯ ಸೌಲಭ್ಯ ಸಿಗದ ಪರಿಣಾಮ ಗುಡಿಬಂಡೆ ನಿಜವಾಗಲೂ ತಾಲೂಕು ಕೇಂದ್ರವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಹೌದು, ತಾಲೂಕು ಕೇಂದ್ರವಾದರೂ ಬೇಕಾಗಿರುವ ಆಧಾರ್​ ನೋಂದಣಿ ಕೇಂದ್ರ, ಪ್ರಧಾನಮಂತ್ರಿ ಜನೌಷಧ ಕೇಂದ್ರ, ಕರ್ನಾಟಕ ಒನ್​ ಸೇರಿ ಇತರ ಸೌಕರ್ಯಗಳು ಗುಡಿಬಂಡೆಯಲ್ಲಿ ಇಲ್ಲದೆ ತಾಲೂಕಿನ ಜನತೆ ಬೇರೆ ತಾಲೂಕುಗಳಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಆಧಾರ್​ ಕೇಂದ್ರವೂ ಇಲ್ಲ: ಯಾವುದೇ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್​ ಕಾರ್ಡ್​ ಕಡ್ಡಾಯ ಎನ್ನುವ ಸರ್ಕಾರ, ತಾಲೂಕು ಕೇಂದ್ರಗಳಲ್ಲಿ ಆಧಾರ್​ ನೋಂದಣಿಗೆ ಕೇಂದ್ರ ಆರಂಭಿಸದೆ ಸಾಮಾನ್ಯ ಜನರು ಪರದಾಡುವಂತೆ ಮಾಡಿದೆ.

ಕೆಲ ತಿಂಗಳ ಹಿಂದೆ ಪಟ್ಟಣದ ಗ್ರಾಮೀಣ ಬ್ಯಾಂಕ್​ನಲ್ಲಿ ಆಧಾರ್​ ನೋಂದಣಿ, ತಿದ್ದುಪಡಿ ಸೇರಿ ಇತರ ಸೇವೆಗಳನ್ನು ನೀಡಲಾಗುತ್ತಿದ್ದರೂ ಕೆಲ ಕಾರಣಗಳಿಂದ ಆಧಾರ್​ ಸೇವೆ ಸ್ಥಗಿತಗೊಂಡಿದೆ. ನಂತರ ಸಾರ್ವಜನಿಕರ ಒತ್ತಡದ ಮೇರೆಗೆ ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್​ ತೆರೆದು ಆಧಾರ್​ ನೋಂದಣಿ ಆರಂಭಿಸಲಾಗಿತ್ತು. ಆದರೆ, 5 ತಿಂಗಳಿಂದ ಈ ಸೇವೆಯೂ ಸ್ಥಗಿತಗೊಂಡಿದೆ. ತಾಲೂಕಿನಲಿ ್ಲಎಲ್ಲೂ ಆಧಾರ್​ ನೋಂದಣಿ ಕೇಂದ್ರಗಳು ಇಲ್ಲದೇ ಜನಸಾಮಾನ್ಯರು ಮತ್ತು ಮಕ್ಕಳ ಹೆಸರು, ಜನ್ಮದಿನಾಂಕ, ಮೊಬೈಲ್​ ಸಂಖ್ಯೆ ಸೇರಿ ಇತರ ಬದಲಾವಣೆ ಮಾಡಿಸಲು ನೆರೆಯ ತಾಲೂಕು ಕೇಂದ್ರಗಳಿಗೆ ಹೋಗಿ ಬರಬೇಕಾಗಿದೆ. ಕೂಡಲೇ ಗುಡಿಬಂಡೆ ತಾಲೂಕು ಕಚೇರಿಯಲ್ಲೇ ಆಧಾರ್​ ಕೇಂದ್ರ ಆರಂಭಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನತೆಯ ಆಗ್ರಹವಾಗಿದೆ.

ಕರ್ನಾಟಕ ಒನ್​ ಕೂಡ ಇಲ್ಲ: ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪಟ್ಟಣದ ಜನತೆಗೆ ಸೌಲಭ್ಯ ಪಡೆಯಲು ಕರ್ನಾಟಕ ಒನ್​ ಕೇಂದ್ರ ಪ್ರಾರಂಭಿಸಿ ಪಡಿತರ ಚೀಟಿ, ಜಾತಿ, ಆದಾಯ ಪ್ರಮಾಣಪತ್ರ ಸೇರಿ ಇತರ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್​ ಕೇಂದ್ರ ಇಲ್ಲದೆ ಜನರು ಪರದಾಡುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕರ್ನಾಟಕ ಒನ್​ ಕೇಂದ್ರ ಆರಂಭಿಸಿ ತಾಲೂಕಿನ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಮುಚ್ಚಿದ ಜನೌಷಧ ಕೇಂದ್ರ: ಬಡವರಿಗೆ ಕಡಿಮೆ ದರದಲ್ಲಿ ಔಷಧ ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ತಾಲೂಕು ಕೇಂದ್ರಗಳಲ್ಲಿಯೂ ಜನೌಷಧ ಕೇಂದ್ರ ಆರಂಭಿಸಿದೆ. ಆದರೆ, ಗುಡಿಬಂಡೆಯಲ್ಲಿರುವ ಈ ಔಷಧ ಕೇಂದ್ರ 15 ದಿನಗಳಿಂದ ಬಾಗಿಲು ತೆರೆದಿಲ್ಲ. ಇದರಿಂದ ಬಡವರಿಗೆ ರಿಯಾಯಿತಿ ದರದಲ್ಲಿ ಔಷಧಗಳು ಸಿಗದೆ ಖಾಸಗಿ ಮೆಡಿಕಲ್​ ಶಾಪ್​ಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜನೌಷಧ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕಿದೆ.

ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಕೆಲ ಕಾರಣಗಳಿಂದ ರಜೆ ಹಾಕಿದ್ದು, ಈ ಬಗ್ಗೆ ನಿರ್ವಹಣಾ ಏಜೆನ್ಸಿಗೂ ಮಾಹಿತಿ ನೀಡಲಾಗಿದೆ. ಆದರೂ ಸಿಬ್ಬಂದಿ ನಿಯೋಜಿಸಿಲ್ಲ. ಆದಷ್ಟು ಬೇಗ ಸಿಬ್ಬಂದಿ ನಿಯೋಜಿಸುವಂತೆ ಮತ್ತೊಮ್ಮೆ ಏಜೆನ್ಸಿಗೆ ತಿಳಿಸಲಾಗುವುದು. | ಡಾ.ಪ್ರದಿಪ್​ ಆಡಳಿತ ವೈದ್ಯಾಧಿಕಾರಿ, ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆ ಗುಡಿಬಂಡೆ ತಾಲೂಕು ಕೇಂದ್ರವಾದರೂ ಕನಿಷ್ಠ ಮೂಲಸೌಕರ್ಯ ಜನರಿಗೆ ತಲುಪುತ್ತಿಲ್ಲ. ಸರ್ಕಾರ ಯೋಜನೆಗಳನ್ನು ಘೋಷಿಸಿದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇನ್ನಾದರೂ ಸ್ಥಳಿಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸೌಲಭ್ಯ ಒದಗಿಸಬೇಕಿದೆ. | ಶ್ರೀನಿವಾಸ್​ ಡಿವೈಎಫ್​ಐ ಜಿಲ್ಲಾ ಕಾರ್ಯದರ್ಶಿ, ಗುಡಿಬಂಡೆ