ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ನಾಲ್ಕು ತಾಲೂಕುಗಳ ಹಲವು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ ಹೋಬಳಿ ಕೇಂದ್ರ ಉಪ್ಪಿನಂಗಡಿಯಲ್ಲಿ ಸಮರ್ಪಕ ಆಧಾರ್ ಸೇವೆ ಒದಗಿಸುವ ಕೇಂದ್ರವಿಲ್ಲದೆ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಚೇರಿಯಲ್ಲಿದ್ದ ಆಧಾರ್ ಸೇವೆ ಸಿಬ್ಬಂದಿ ಕೊರತೆಯಿಂದ ಸ್ಥಗಿತಗೊಂಡು 15 ತಿಂಗಳು ಕಳೆದರೂ ಪರ್ಯಾಯ ವ್ಯವಸ್ಥೆಯಾಗದಿರುವುದು ಜನತೆ ಸಂಕಷ್ಟಕ್ಕೀಡು ಮಾಡಿದೆ. ಖಾಸಗಿ ಸಂಸ್ಥೆ ನೇತೃತ್ವದಲ್ಲಿ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಆಧಾರ್ ಸೇವೆ ಲಭಿಸುತ್ತಿದ್ದರೂ ಅಲ್ಲಿ ಎಲ್ಲ ಸ್ವರೂಪದ ಸೇವೆ ಲಭಿಸುತ್ತಿಲ್ಲ. ಮುಖ್ಯವಾಗಿ ಸಣ್ಣ ಮಕ್ಕಳ ಆಧಾರ್ ಕಾರ್ಡ್ ಅಪ್‌ಡೇಟ್ ಕಾರ್ಯ ನಡೆಯದಿರುವುದರಿಂದ ದಿನವಿಡೀ ಸರತಿ ಸಾಲಿನಲ್ಲಿ ನಿಂತು ಬಳಿಕ ನಿರ್ಗಮಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಎಳೆಯ ಮಕ್ಕಳನ್ನು ಪುತ್ತೂರಿಗೆ ಕರೆದೊಯ್ದು ಅಲ್ಲಿ ಸರತಿ ಸಾಲಿನಲ್ಲಿ ನಿಂತು ಆಧಾರ್ ಸೇವೆ ಪಡೆದುಕೊಳ್ಳುವ ಸ್ಥಿತಿ ಇದೆ.
ಅಂಚೆ ಕಚೇರಿಯಲ್ಲಿ ಸೇವೆ ಕಣ್ಮರೆ: ದೇಶದ ವಿಶ್ವಾಸಾರ್ಹ ಸಂಸ್ಥೆಯಾಗಿರುವ ಅಂಚೆ ಕಚೇರಿಯಲ್ಲಿ ಕಳೆದ ಕೆಲ ತಿಂಗಳವರೆಗೆ ಮೆಸ್ಕಾಂ ಬಿಲ್ ಪಾವತಿ, ಎಲ್‌ಐಸಿ ಪ್ರೀಮಿಯಂ ಪಾವತಿ ವ್ಯವಸ್ಥೆ ಇದ್ದು ಗ್ರಾಹಕರಿಗೆ ದಿನ ನಿತ್ಯ ಸೇವೆ ಲಭಿಸುತ್ತಿತ್ತು. ಅವೆರಡೂ ಸೇವೆ ಸದ್ದಿಲ್ಲದೆ ಕಣ್ಮರೆಯಾಗಿವೆ. ಉತ್ತಮ ಆದಾಯ ತಂದುಕೊಡುತ್ತಿದ್ದ ಆಧಾರ್ ಸೇವೆ 15 ತಿಂಗಳಿನಿಂದ ಸಿಬ್ಬಂದಿ ಇಲ್ಲವೆಂಬ ಕಾರಣಕ್ಕೆ ಸ್ಥಗಿತಗೊಂಡಿರುವುದು ಗ್ರಾಹಕರನ್ನು ಸಮಸ್ಯೆಗೆ ಸಿಲುಕುವಂತೆ ಮಾಡಿದೆ. ಉತ್ತಮ ಸೇವೆಯೊಂದಿಗೆ ಜನಮಾನಸದಲ್ಲಿ ಬೆರೆತಿರುವ ಅಂಚೆ ಕಚೇರಿಯಲ್ಲಿ ಸೇವೆಗಳು ನಿರಂತರ ದೊರಕುವಂತೆ ಮಾಡಬೇಕಾದ ಅಗತ್ಯ ಇದೆ ಎಂದು ಗೆಳೆಯರು-94 ಸಂಸ್ಥೆ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು ಆಗ್ರಹಿಸಿದ್ದಾರೆ.
ಪ್ರಸಕ್ತ ಆಧಾರ್ ದಾಖಲೆ ಹೊಂದುವುದು ಮತ್ತು ಅದನ್ನು ಕಾಲ ಕಾಲಕ್ಕೆ ಅಪ್‌ಡೇಟ್ ಮಾಡಬೇಕಾಗುವುದು ಅಗತ್ಯವಿರುವಾಗ ಅದಕ್ಕೆ ಸಂಬಂಧಿಸಿ ಸೇವೆ ಲಭಿಸುವಂತೆ ಮಾಡುವುದು ಸರ್ಕಾರದ ಕರ್ತವ್ಯ. ಸಿಬ್ಬಂದಿ ಕೊರತೆ ಕಾರಣಕ್ಕೆ ಅಂಚೆ ಕಚೇರಿಯಲ್ಲಿ 15 ತಿಂಗಳಿಂದ ಆಧಾರ್ ಸೇವೆ ಸ್ಥಗಿತಗೊಂಡಿದೆ ಎನ್ನುವುದು ಆಡಳಿತ ವ್ಯವಸ್ಥೆಗೆ ಶೋಭೆಯಲ್ಲ. ಜನರು ಆಧಾರ್ ಸೇವೆಗಾಗಿ ದಿನಗಟ್ಟಲೆ ಅಲೆದಾಡುವ ಸ್ಥಿತಿ ಇಂದಿಗೂ ಇದೆ ಎನ್ನುವುದು ಖೇದಕರ. ಜನಪ್ರತಿನಿಧಿಗಳು ಇದರತ್ತ ಗಮನಹರಿಸಿ ಉಪ್ಪಿನಂಗಡಿಯಲ್ಲಿ ಮುಖ್ಯವಾಗಿ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ದೊರಕುವಂತಾಗಲು ಕ್ರಮ ಕೈಗೊಳ್ಳಬೇಕು. ಹಾರೂನ್ ರಶೀದ್ ಅಗ್ನಾಡಿ ಉಪ್ಪಿನಂಗಡಿ ಛೇಂಬರ್ ಆ್ ಕಾಮರ್ಸ್ ಪೂರ್ವಾಧ್ಯಕ್ಷ
ಈ ಹಿಂದೆ ಉಪ್ಪಿನಂಗಡಿಯಲ್ಲಿ ಆಧಾರ್ ಸೇವೆಗೆಂದೇ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಿನಂಪ್ರತಿ 40ಕ್ಕೂ ಮಿಕ್ಕಿದ ಮಂದಿಗೆ ಆಧಾರ್ ಸೇವೆ ಒದಗಿಸಲಾಗುತ್ತಿತ್ತು. ಆದರೆ ಸಿಬ್ಬಂದಿ ವರ್ಗಾವಣೆ ಬಳಿಕ ಸಿಬ್ಬಂದಿ ಇಲ್ಲ ಎಂಬ ಕಾರಣ ನೀಡಿ 2024ರ ಜೂನ್ ತಿಂಗಳಿನಿಂದ ಆಧಾರ್ ಸೇವೆ ಸ್ಥಗಿತಗೊಳಿಸಲಾಗಿದೆ. ಇದು ಪರಿಸರದ ಜನರನ್ನು ಹೈರಾಣಾಗಿಸಿದೆ. ಅಂಚೆ ಕಚೇರಿಯಲ್ಲಿ ಪ್ರತಿನಿತ್ಯ ಆಧಾರ್ ಸೇವೆ ದೊರಕುವಂತಾಗಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.