ಚಿಕ್ಕಬಳ್ಳಾಪುರ : ಯಾರದ್ದೋ ಆಸ್ತಿ ಬೇರೆ ಯಾರಿಗೋ ಅಕ್ರಮವಾಗಿ ನೋಂದಣಿಯಾಗುವುದನ್ನು ತಪ್ಪಿಸಲು ಕಂದಾಯ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಕಾರ್ಯ ಕೈಗೊಂಡಿದ್ದು ಪ್ರಸ್ತುತ ಶೇ.80 ಸಾಧನೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯು ಶುಕ್ರವಾರ ಹಮ್ಮಿಕೊಂಡಿದ್ದ ಜೋಡಿ ಗ್ರಾಮಗಳ ರೈತರಿಗೆ ಆರ್‌ಟಿಸಿ ಪಹಣಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರ ಜಮೀನು ಕಬಳಿಕೆ ತಪ್ಪಿಸಲು ಆರ್‌ಟಿಸಿ ಪಹಣಿಗಳೊಂದಿಗೆ ಆಧಾರ್ ಸಂಖ್ಯೆ ಜೋಡಣೆಗೊಳಿಸುತ್ತಿದ್ದು ಶೀಘ್ರದಲ್ಲಿಯೇ ಶೇ.100 ಗುರಿ ಸಾಧನೆ ಮಾಡಲಾಗುವುದು ಎಂದರು.
ಸಣ್ಣಪುಟ್ಟ ವ್ಯತ್ಯಾಸಗಳಿಗೆ ರೈತರು ತಕರಾರು ಗಲಾಟೆ ಮಾಡಿಕೊಂಡಾಗ ನೆರೆಹೊರೆ ಜಮೀನು ಮಾಲೀಕರ ಜತೆಗೆ ತೊಂದರೆ ಅನುಭವಿಸಬೇಕಾಗುತ್ತದೆ. ನ್ಯಾಯಾಲಯದ ಮೆಟ್ಟಿಲೇರಿ ಹಣ, ನೆಮ್ಮದಿ ಕಳೆದುಕೊಂಡು ಹಾಳಾಗಬೇಕಾಗುತ್ತದೆ. ತಕರಾರಿಗೆ ಅವಕಾಶ ನೀಡಬೇಡಿ ಎಂದು ಸಲಹೆ ನೀಡಿದರು.
ಮತ್ತೆ ಪೌತಿ ಖಾತೆ ಆಂದೋಲನ
ರಾಜ್ಯದಲ್ಲಿ ಮತ್ತೆ ಪೌತಿ ಖಾತೆ ಆಂದೋಲನ ಕೈಗೊಳ್ಳಲಾಗುತ್ತಿದೆ. ಬಾಕಿ ಇರುವ 47 ಲಕ್ಷ ಸರ್ವೇ ನಂಬರುಗಳನ್ನು ಶೀಘ್ರ ವಿಲೇವಾರಿ ಮಾಡಲಾಗುತ್ತದೆ. ರಾಜ್ಯದಲ್ಲಿ ಜಮೀನುಗಳ ದುರಸ್ತಿ ಮಾಡಿ, ರೈತರಿಗೆ ಹೊಸ ಆರ್‌ಟಿಸಿ ಪಹಣಿಗಳನ್ನು ಸೃಜಿಸಿಕೊಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಂದಾಯ ಇಲಾಖೆ ಹೊಸ ಆ್ಯಪ್ ಮತ್ತಿತರ ತಂತ್ರಾಂಶಗಳನ್ನು ಬಳಸಿಕೊಂಡು ರೈತರು ಮತ್ತು ಸಾರ್ವಜನಿಕರ ಭೂಮಿ ಸಮಸ್ಯೆಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ನಿರ್ಧರಿಸಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಪ್ರಕರಣಗಳ ತ್ವರಿತ ವಿಲೇವಾರಿ
ರಾಜ್ಯದ ವಿವಿಧ ಜಿಲ್ಲೆಗಳ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ 69,217 ಖಾತೆ ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ ಒಂದು ವರ್ಷ ಮೀರಿದ ಪ್ರಕರಣಗಳು 59800, ಐದು ವರ್ಷಕ್ಕಿಂತ ಹೆಚ್ಚಿನ ಅವಧಿ ದಾಟಿದ್ದ 32,787 ಪ್ರಕರಣಗಳು ಸೇರಿದ್ದು 5 ವರ್ಷ ಮೀರಿದ ಪ್ರಕರಣಗಳ ಸಂಖ್ಯೆ ಈಗ 7,330ಕ್ಕೆ ಇಳಿದಿದೆ. ಗರಿಷ್ಠ ಪ್ರಕರಣಗಳು ಅತಿ ಕಡಿಮೆ ಅವಧಿಯಲ್ಲಿ ವಿಲೇವಾರಿಯಾಗಿ, ಈಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಸಂಖ್ಯೆ 27000 ಆಗಿದೆ. ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿ ಗರಿಷ್ಠ 90 ದಿನಗಳಲ್ಲಿ ವಿಲೇವಾರಿಯಾಗಬೇಕಾದ ಪ್ರಕರಣಗಳು 212 ದಿನ ತೆಗೆದುಕೊಳ್ಳುತ್ತಿದ್ದವು. ಈಗ ಸರಾಸರಿ 82 ದಿನಗಳಲ್ಲಿ ವಿಲೇವಾರಿಯಾಗುತ್ತಿರುವುದು ಸರ್ಕಾರದ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಸಿಬ್ಬಂದಿ ಕೊರತೆ ನೀಗಿಸಲು ಕ್ರಮ
ರಾಜ್ಯದಲ್ಲಿ ಕಂದಾಯ ಇಲಾಖೆ ಎದುರಿಸುತ್ತಿರುವ ಸಿಬ್ಬಂದಿ ಕೊರತೆ ನೀಗಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈಗಾಗಲೇ 1 ಸಾವಿರ ಗ್ರಾಮಲೆಕ್ಕಿಗರ ನೇರ ನೇಮಕಾತಿ ಪಕ್ರಿಯೆ ಪ್ರಗತಿಯಲ್ಲಿದೆ. ಈ ವರ್ಷದ ಅಂತ್ಯಕ್ಕೆ ಹೊಸ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. 357 ಭೂಮಾಪಕರ ಭರ್ತಿ ಪ್ರಕ್ರಿಯೆ ನಡೆಯುತ್ತಿದ್ದು ಇಲಾಖೆಯ ಕಾರ್ಯ ಚಟುವಟಿಕೆಯ ವೇಗ ಹೆಚ್ಚಿಸಲು 1,191 ಪರವಾನಗಿ ಹೊಂದಿದ ಭೂಮಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು. ರಾಜ್ಯದಲ್ಲಿ 14 ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಜಮೀನುಗಳನ್ನು ಗುರುತಿಸಲಾಗಿದೆ. ಇನ್ನು ಒತ್ತುವರಿ ತೆರವು ಕಾರ್ಯವನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ವಿಧಾನಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ.ಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಅಪರ ಜಿಲ್ಲಾಧಿಕಾರಿ ಎನ್. ಭಾಸ್ಕರ್ ಮತ್ತಿತರರು ಇದ್ದರು.
ಮುಂದಿನ ನಾಲ್ಕು ವರ್ಷಗಳಲ್ಲಿ ದರಖಾಸ್ತು ಸಂಬಂಧ 8ರಿಂದ 11 ಲಕ್ಷ ರೈತರ ಸರ್ವೇ ನಂಬರ್‌ಗಳು ಹಾಗೂ ಖಾಸಗಿ ಹಿಡುವಳಿದಾರರ ಸರ್ವೇ ನಂಬರ್‌ಗಳೂ ಸೇರಿ 60 ಲಕ್ಷ ಪಹಣಿಗಳನ್ನು ಸೃಜಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ | ಕೃಷ್ಣಬೈರೇಗೌಡ, ಕಂದಾಯ ಸಚಿವ
ಪಾಠ ಹೇಳಿದ್ದ ಅಧಿಕಾರಿಗೆ ಉತ್ತರ
ಜೋಡಿ ಗ್ರಾಮಗಳಲ್ಲಿನ ಕೃಷಿ ಜಮೀನುಗಳ ಇಂಡೀಕರಣಕ್ಕೆ ಸಲಹೆ ನೀಡಿದ ಸಂದರ್ಭದಲ್ಲಿ ಸಚಿವರಿಗೆ ಅಧಿಕಾರಿಯೊಬ್ಬ ಪಾಠ ಹೇಳಲು ಬಂದಿದ್ದ. ತಾಂತ್ರಿಕ ಸಮಸ್ಯೆಗಳ ಹೆಸರಿನಲ್ಲಿ ಮಾರುತ್ತರ ನೀಡಿದ್ದು ಇದನ್ನು ಸವಾಲನ್ನಾಗಿ ಸ್ವೀಕರಿಸಿ, ಹಲವು ದಶಕಗಳ ಸಮಸ್ಯೆ ಬಗೆಹರಿಸಲಾಗಿದೆ. ರೈತರಿಗೆ ಪಹಣಿಗಳನ್ನು ವಿತರಿಸಲಾಗುತ್ತಿದೆ. ಇದು ನನ್ನ ರಾಜಕೀಯ ಜೀವನದಲ್ಲಿ ಸಂತಸದ ಕ್ಷಣ. ಇದನ್ನು ಮಾತಿನಲ್ಲಿ ಹೇಳಲು ಆಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭಾವುಕರಾದರು. ಜಿಲ್ಲೆಯಲ್ಲಿ 1954ರಿಂದ ಜೋಡಿ ಗ್ರಾಮಗಳ ರೈತರಿಗೆ ಪಹಣಿ ಆಗದೆ ಸಮಸ್ಯೆ ಆಗಿತ್ತು. ದಶಕಗಳ ಕನಸು ಇಂದು ನನಸಾಗಿದೆ. ಜಿಲ್ಲೆಯಲ್ಲಿ 28 ಜೋಡಿ ಗ್ರಾಮಗಳ 12,503 ಎಕರೆ ಜಮೀನುಗಳ ದಾಖಲೆ ಸೃಜನೆಗೆ ತೊಂದರೆಯಾಗಿತ್ತು. ಕಳೆದ ಒಂದು ವರ್ಷದಲ್ಲಿ ಈ ಸಮಸ್ಯೆಯನ್ನು ಕೈಗೆತ್ತಿಕೊಂಡು 5,812 ಸರ್ವೇ ನಂಬರುಗಳನ್ನು ಸೃಜಿಸಲಾಗಿದೆ. ಈವರೆಗೆ 1,830 ಸರ್ವೇ ನಂಬರ್‌ಗಳನ್ನು ಇಂಡೀಕರಿಸಲಾಗಿದೆ ಎಂದು ಸಚಿವರಿಬ್ಬರು ತಿಳಿಸಿದರು.
ಪಹಣಿ ದಾಖಲೆಗಳ ವಿತರಣೆ
ಕಾರ್ಯಕ್ರಮದಲ್ಲಿ ಜಿಲ್ಲೆಯ 8 ತಾಲೂಕುಗಳ ರೈತರಿಗೆ ಸಾಂಕೇತಿಕವಾಗಿ ಜೋಡಿ ಗ್ರಾಮಗಳ ಪಹಣಿಗಳನ್ನು ಸಚಿವ ಕೃಷ್ಣಬೈರೇಗೌಡ ವಿತರಿಸಿದರು. ಮುಂದಿನ ವರ್ಷ ಹೊಸ ತಾಲೂಕುಗಳಾದ ಚೇಳೂರು ಮತ್ತು ಮಂಚೇನಹಳ್ಳಿಗೆ ಆಡಳಿತ ಕೇಂದ್ರದ ಕಟ್ಟಡ ಪ್ರಜಾಸೌಧವನ್ನು ಮಂಜೂರು ಮಾಡಲಾಗುವುದು ಎಂದರು.
ಮಂಚೇನಹಳ್ಳಿ ತಾಲೂಕು ಅಭಿವೃದ್ಧಿ
ಮಂಚೇನಹಳ್ಳಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಸೇರಿ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಗಮನ ಸೆಳೆದರು. ಕಂದಾಯ ಇಲಾಖೆಯಲ್ಲಿ ಹಲವು ಕ್ರಾಂತಿಕಾರಕ ಕಾರ್ಯಗಳು ನಡೆಯುತ್ತಿದ್ದು, ಚಿಕ್ಕಬಳ್ಳಾಪುರ ತಾಲೂಕು ಕಚೇರಿಯಲ್ಲಿನ ಕಡತಗಳ ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 17 ಲಕ್ಷ ಪುಟಗಳ ದಾಖಲೆ ಸ್ಕ್ಯಾನ್ ಆಗಿದೆ. ಇದರಲ್ಲಿ ತ್ವರಿತವಾಗಿ ಪೂರ್ಣ ಸಾಧನೆಯಾಗಲಿದೆ. ಬಳಿಕ ದಾಖಲೆಗಳು ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಗೆ ದೊರಕಲಿವೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಚೇಳೂರಿನತ್ತ ಗಮನಹರಿಸಿ
ಚೇಳೂರು ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ
ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಚಿವರಿಗೆ ಮನವಿ ಮಾಡಿದರು. ನಕಲಿ ಹಿಡುವಳಿ ಚೀಟಿಗಳನ್ನು ಹಾಗೂ ಇನ್ನಿತರ ದಾಖಲೆಗಳನ್ನು ಅಭಿಲೇಖಾಲಯಕ್ಕೆ ಸೇರ್ಪಡೆಗೊಳಿಸಿ ಕಂದಾಯ ದಾಖಲೆಗಳನ್ನು ಸೃಜಿಸಲು ಕೆಲವರು ಪ್ರಯತ್ನಿಸಿದ್ದು ಈ ನಿಟ್ಟಿನಲ್ಲಿ ತನಿಖಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು. ಪಟ್ಟಣ, ನಗರದ ಸುತ್ತಲ 5 ಕಿ.ಮೀ ವ್ಯಾಪ್ತಿಯೊಳಗಡೆ ಇರುವ ಸರ್ಕಾರಿ ಜಮೀನುಗಳಿಗೆ ಫೆನ್ಸಿಂಗ್ ಹಾಕಿಸಿ ಸಂರಕ್ಷಿಸಬೇಕು ಎಂದು ಮನವಿ ಮಾಡಿದರು.