ಜಿಲ್ಲೆ

ಪೆರಿಯಣ್ಣನಿಗೆ ಆಧಾರ್​ ಕಾರ್ಡ್​ ಭಾಗ್ಯ

ಗಂಗಾಧರ ಬಿ ವಿ

ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಿದ ಅಧಿಕಾರಿಗಳು

ವಿಜಯವಾಣಿ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಕಳೆದ ಹತ್ತು ವರ್ಷಗಳಿಂದ ಮಲಗಿದ್ದಲ್ಲೇ ಬದುಕು ನಡೆಸುತ್ತಿರುವ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಮೂಡ್ಲಳ್ಳಿದೊಡ್ಡಿ ಪೆರಿಯಣ್ಣನಿಗೆ ಅಧಿಕಾರಿಗಳ ಇಚ್ಛಾಸಕ್ತಿಯಿಂದ ಕೊನೆಗೂ ಆಧಾರ್​ ಕಾರ್ಡ್​ ಭಾಗ್ಯ ದಕ್ಕಿದೆ.

ಮರದಿಂದ ಬಿದ್ದು ಕಾಲುಗಳನ್ನು ಮುರಿದುಕೊಂಡ ಪರಿಣಾಮ ಹಾಸಿಗೆಯಲ್ಲೇ ಜೀವನ ಸವೆಸುತ್ತಿರುವ ಪೆರಿಯಣ್ಣನ ಕರುಣಾಜನಕ ಸ್ಥಿತಿ ಕುರಿತು "10 ವರ್ಷಗಳಿಂದ ಹಾಸಿಗೆಯಲ್ಲೇ ಬದುಕು' ಶೀರ್ಷಿಕೆಯಲ್ಲಿ ಸೆಪ್ಟೆಂಬರ್​ 17ರಂದು "ವಿಜಯವಾಣಿ' ವರದಿ ಪ್ರಕಟಿಸಿತ್ತು

ಈ ಹಿನ್ನೆಲೆಯಲ್ಲಿ ತಹಸೀಲ್ದಾರ್​ ತೇಜಸ್ವಿನಿ ಮತ್ತು ತಾಲೂಕು ಪಂಚಾಯಿತಿ ಇಒ ಪ್ರದಿಪ್​, ಪೆರಿಯಣ್ಣನ ಸಂಕಷ್ಟಕ್ಕೆ ಮಿಡಿದರು. ಕೈಲಾಂಚ ಉಪ ತಹಸೀಲ್ದಾರರ್​ ರುದ್ರಮ್ಮ ರಾಜಸ್ವ ನಿರೀಕ್ಷಕ ಪುಟ್ಟರಾಜು ಹುಣಸನಹಳ್ಳಿ ಪಿಡಿಒ ಬಿ.ಪಿ. ಕುಮಾರ್​, ಅಧ್ಯಕ್ಷ ಪುಟ್ಟಸ್ವಾಮಿ ಅವರು ಆತನ ತಾಯಿಯ ದಾಖಲಾತಿ ಮೇರೆಗೆ ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಮತದಾನ ಗುರುತಿನ ಚೀಟಿ, ಮತ್ತಿತರ ದಾಖಲಾತಿ ಮಾಡಿ ಆಧಾರ್​ಕಾರ್ಡ್​ಗೆ ಸೂಕ್ತ ದಾಖಲಾತಿ ತಯಾರಿಸಿದರು.

ಗುರುವಾರ ಪೆರಿಯಣ್ಣನ ಮನೆಗೆ ಆಧಾರ್​ ಕಾರ್ಡ್​ ಮಾಡಲು ಬೇಕಾದ ಕಂಪ್ಯೂಟರ್​ ಯಂತ್ರ ಸಮೇತ ಅಧಿಕಾರಿಗಳು ಭೇಟಿ ನೀಡಿ ಬೆರಳಚ್ಚು, ಫೋಟೋ, ಕಣ್ಣಿನ ಮಾದರಿ ಪಡೆದು ಕೊನೆಗೂ ಪೆರಿಯಣ್ಣನಿಗೆ ಆಧಾರ್​ ಕಾರ್ಡ್​ ದೊರೆಯುವಂತೆ ಮಾಡಿದ್ದಾರೆ.ಅಂತೆಯೇ, ವಿಜಯವಾಣಿಯ ಈ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಾಪಂನಿಂದ ಮನೆ ಮಂಜೂರು

ತಾಪಂ ಇಒ ಪ್ರದಿಪ್​ ಒಂದೇ ದಿನದಲ್ಲಿ ಆಶ್ರಯ ಮನೆ ಮಂಜೂರು ಮಾಡಿ ವಸತಿ ನಿಗಮಕ್ಕೆ ಪ್ರಸ್ತಾವನೆ ಕಳಿಸಿ ಪೆರಿಯಣ್ಣನ ಬದುಕಿಗೆ ಆಶ್ರಯ ಮನೆ ಮಂಜೂರು ಆಗುವಂತೆ ಮಾಡಿದ್ದು, ಗ್ರಾಪಂ ಅಧಿಕಾರಿಗಳು, ಅಧ್ಯಕ್ಷರಿಗೆ ಮನೆ ನಿರ್ಮಾಣಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ತಿಳಿಸಿದ್ದಾರೆ.

ಚಿಕಿತ್ಸೆಗೆ ಬೇಕಿದೆ ಮುತುವರ್ಜಿ

ಪೆರಿಯಣ್ಣ ಹಾಸಿಗೆ ಬಿಟ್ಟು ಏಳಲು ಆಗುತ್ತಿಲ್ಲ. ಕಾಲಿಗೆ ಹಾಕಿದ ರಾಡಿನ ಮೇಲೆ ಚರ್ಮ ಬೆಳೆದಿದೆ. ಸೂಕ್ತ ಚಿಕಿತ್ಸೆ ಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮುತುವರ್ಜಿ ವಹಿಸಿದರೆ ಆತನ ಆರೋಗ್ಯ ಸುಧಾರಿಸಿ ಎಲ್ಲರಂತೆ ಜೀವನ ನಡೆಸುವಂತೆ ಮಾಡಬಹುದು. ಜಿಲ್ಲಾ ಆರೋಗ್ಯ ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸಬೇಕಿದೆ.

ಪೆರಿಯಣ್ಣನ ಬದುಕು ಕಷ್ಟಕರವಾಗಿದೆ. ಆತನಿಗೆ ಸಹಾಯಕವಾಗುವ ಒಂದೇ ಒಂದು ದಾಖಲಾತಿ ಇರಲಿಲ್ಲ. ಪೂರಕ ದಾಖಲಾತಿ ಸಂಗ್ರಹಿಸಿ, ಆಶ್ರಯ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಿಸಲಾಗಿದೆ. ಜತೆಗೆ ಗ್ರಾಪಂನಿಂದ ಸಿಗುವ ಸವಲತ್ತು ನೀಡಲಾಗುತ್ತದೆ.

> ಟಿ. ಪ್ರದಿಪ್​, ತಾಪಂ ಇಒ, ರಾಮನಗರ

ಪೆರಿಯಣ್ಣನಿಗೆ ಸರ್ಕಾರದ ಸವಲತ್ತು ಸಿಗದಿರುವುದು, ತಾಲೂಕು ಆಡಳಿತದ ಗಮನಕ್ಕೆ ಬಂದಿರಲಿಲ್ಲ. ಅವರ ಸಮಸ್ಯೆ ನಮಗೆ ತಿಳಿದ ತಕ್ಷಣವೇ ಸೂಕ್ತ ದಾಖಲಾತಿ ಸಂಗ್ರಹಿಸಿ ಸರ್ಕಾರದ ಸವಲತ್ತು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಪೆರಿಯಣ್ಣನ ಮನೆಗೆ ಹೋಗಿ ಆಧಾರ್​ ಕಾರ್ಡ್​ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದೆ ಮತ್ತಿತರ ಸರ್ಕಾರದ ಸವಲತ್ತು ತಲುಪಿಸಲಾಗುತ್ತದೆ.

ತೇಜಸ್ವಿನಿ, ತಹಸೀಲ್ದಾರ್​, ರಾಮನಗರ ತಾಲೂಕು

ಸಾಮಾಜಿಕ ಕಳಕಳಿಗೆ ಪೆರಿಯಣ್ಣನ ಕುರಿತಾದ ವಿಜಯವಾಣಿ ವರದಿಯೇ ಸಾಯಾಗಿದೆ. 10 ವರ್ಷಗಳಿಂದ ಸರ್ಕಾರದ ಸವಲತ್ತು ವಂಚಿತನಾಗಿ ಮೂಕ ರೋದನ ಅನುಭವಿಸುತ್ತಿದ್ದ ಪೆರಿಯಣ್ಣನ ಬದುಕು ಹಸನಾಗುವಂತೆ, ಬದುಕಿಗೆ ಒಂದಷ್ಟು ಸಹಾಯಕವಾಗುವಂತೆ ವರದಿ ಮುಖಾಂತರ ಆಡಳಿತಗಳ ಕಣ್ಣು ತೆರೆಸಿದ ವಿಜಯವಾಣಿಗೆ ಧನ್ಯವಾದಗಳು.

ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ, ಹುಣಸನಹಳ್ಳಿ