ಜಿಲ್ಲೆ

ಆಸ್ತಿ ನೋಂದಣಿಗೆ ಆಧಾರ್ ದೃಢೀಕರಣ ಅಗತ್ಯ

ಜಗದೀಶ ಹೊಂಬಳಿ

ಬೆಳಗಾವಿ: ಇನ್ಮುಂದೆ ಸ್ಥಿರಾಸ್ತಿ ಸೇರಿ ದಸ್ತಾವೇಜುಗಳ ನೋಂದಣಿಗೆ ಆಧಾರ್ ದೃಢೀಕರಣ ಅತ್ಯಗತ್ಯವಾಗಿದೆ. ಆಧಾರ್ ದೃಢೀಕರಣದಿಂದ ಆಸ್ತಿ ನೋಂದಣಿಯಲ್ಲಿನ ಲೋಪದೋಷ ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ನಗರದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸ್ಥಿರಾಸ್ತಿಗಳ ನೋಂದಣಿ ಸಂದರ್ಭದಲ್ಲಿ ಆಧಾರ್ ಧೃಡೀಕರಣ ಪಡೆಯವ ಪ್ರಕ್ರಿಯೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಆಸ್ತಿ ನೋಂದಣಿ ಮಾಡುವಾಗ ಆಧಾರ್ ದೃಢೀಕರಣವು ಸಮ್ಮತಿ ಆಧಾರಿತ ಆಗಿರುವುದರಿಂದ ಸಾರ್ವಜನಿಕರು ನಿಗದಿತ ನಮೂನೆಯಲ್ಲಿ ಸಮ್ಮತಿ ನೀಡಬೇಕಾಗುತ್ತದೆ. ದೃಢೀಕರಣಕ್ಕಾಗಿ 30 ಸೆಕೆಂಡ್‌ಗಳಲ್ಲಿ ಒಟಿಪಿ ಬರುವುದರಿಂದ ಯಾವುದೇ ಅನನುಕೂಲ ಆಗುವುದಿಲ್ಲ. ನೋಂದಣಿ ಸಂದರ್ಭದಲ್ಲಿ ಉಂಟಾಗಬಹುದಾದ ಅಕ್ರಮ ಅಥವಾ ಲೋಪದೋಷ ತಡೆಗಟ್ಟಲು ತಂತ್ರಜ್ಞಾನ ಬಳಸಿಕೊಂಡು ಆಧಾರ್ ದೃಢೀಕರಣ ಮಾಡಲಾಗುತ್ತದೆ. ಸಾರ್ವಜನಿಕರು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ನೋಂದಣಾಧಿಕಾರಿ ಮಹಾಂತೇಶ ಪಟಾತರ ಮಾತನಾಡಿ, ಆಸ್ತಿ ನೋಂದಣಿ ಸಂದರ್ಭದಲ್ಲಿ ಅನಧಿಕೃತ ವ್ಯಕ್ತಿಯ ಹೆಬ್ಬೆಟ್ಟು ಅಥವಾ ಸಹಿ ಪಡೆದು ಅಕ್ರಮವಾಗಿ ನೋಂದಣಿ ಮಾಡುವುದನ್ನು ಆಧಾರ್ ದೃಢೀಕರಣದಿಂದ ತಡೆಗಟ್ಟಬಹುದು ಎಂದು ವಿವರಿಸಿದರು. ಕಾವೇರಿ-2.0 ತಂತ್ರಾಂಶದಲ್ಲಿ ಸ್ಥಿರಾಸ್ತಿಗಳ ನೋಂದಣಿಯಲ್ಲಿ ಆಧಾರ್ ದೃಢೀಕರಣವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಆಧಾರ್ ದೃಢೀಕರಣವು ಪಕ್ಷಕಾರರಿಗೆ ಮಾತ್ರ ಅನ್ವಯಿಸುತ್ತದೆ. ಸಾಕ್ಷಿಗಳಿಗೆ ಅನ್ವಯಿಸುವುದಿಲ್ಲ. ಆಧಾರ್ ದೃಢೀಕರಣ ನಂತರ ಉಪ ನೋಂದಣಾಧಿಕಾರಿಗಳು ಡೆಮೊಗ್ರಾಫಿಕ್ ಡೇಟಾ ಪರಿಶೀಲಿಸಿ ನೋಂದಣಿ ಕಾಯ್ದೆ ಅನುಸಾರ ಕ್ರಮ ಜರುಗಿಸುತ್ತಾರೆ. ಇದಲ್ಲದೇ ಸಮ್ಮರಿ ರಿಪೋರ್ಟ್ ನಲ್ಲಿ ಪಕ್ಷಕಾರರ ಹೆಸರು ಆಧಾರ್ ಹೆಸರಿನೊಂದಿಗೆ ತಾಳೆಯಾಗುವುದನ್ನು ಖಚಿತಪಡಿಸಿಕೊಂಡು ನೋಂದಣಿ ಪ್ರಕ್ರಿಯೆ ಮುಂದುವರಿಸಲಾಗುತ್ತದೆ ಎಂದು ವಿವರಿಸಿದರು.