ಜಿಲ್ಲೆ

ಮದುವೆ ಆಗಬೇಕಿದ್ದ ಯುವತಿ ರಸ್ತೆ ಅಪಘಾತದಲ್ಲಿ ಸಾವು

ಶಿವಮೊಗ್ಗ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂದಿನ 15 ದಿನದಲ್ಲೇ ಆಕೆ ಹಸೆಮಣೆ ಏರಬೇಕಿತ್ತು. ಹೊಸ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಯುವತಿಗೆ ಕುರುಕಲು ಪದಾರ್ಥ ಮಾರಾಟಗಾರನ ಬೈಕ್ ಮತ್ತು ನಗರ ಸಾರಿಗೆ ಖಾಸಗಿ ಬಸ್ ಯಮಸ್ವರೂಪಿಯಾಗಿ ಬಂದಿದ್ದು, ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ.

ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯ ಟಿ.ಕವಿತಾ ಬಾಯಿ(26) ಮೃತ ಯುವತಿ. ಸಹೋದರನೊಂದಿಗೆ ದುಮ್ಮಳ್ಳಿಯಿಂದ ಶಿವಮೊಗ್ಗಕ್ಕೆ ಸ್ನೇಹಿತರಿಗೆ ಮದುವೆ ಆಮಂತ್ರಣ ಕಾರ್ಡ್‌ಗಳನ್ನು ನೀಡಲು ಬರುವಾಗ ನಗರ ಹೊರವಲಯದ ಮಲವಗೊಪ್ಪದ ಸಕ್ಕರೆ ಫ್ಯಾಕ್ಟರಿ ಬಳಿ ಬೈಕ್‌ಗಳು ಮುಖಾಮುಖಿ ಡಿಕ್ಕಿಯಿಂದ ರಸ್ತೆ ಮೇಲೆ ಬಿದ್ದಿದ್ದ ಯುವತಿ ಮೇಲೆ ನಗರ ಸಾರಿಗೆ ಬಸ್ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಮಲವಗೊಪ್ಪದ ಬಳಿ ಇರುವ ಸಕ್ಕರೆ ಫ್ಯಾಕ್ಟರಿ ಮತ್ತು ಹಾಥಿನಗರದ ನಡುವೆ ಸೋಮವಾರ ಬೆಳಗ್ಗೆ ಸಹೋದರ ಸಂತೋಷ್ ಜತೆ ಕವಿತಾ ಬೈಕ್‌ನಲ್ಲಿ ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೋಟಿ ಮತ್ತು ಕುರುಕಲು ಪದಾರ್ಥಗಳ ಮಾರಾಟಗಾರನ ಬೈಕ್ ಡಿಕ್ಕಿ ಹೊಡೆದಿದೆ. ಸಂತೋಷ್ ರಸ್ತೆಯ ಫುಟ್‌ಪಾತ್ ಕಡೆ ಬಿದ್ದರೆ ಹಿಂಬದಿ ಕುಳಿತಿದ್ದ ಕವಿತಾ ರಸ್ತೆ ಮಧ್ಯೆ ಬಿದ್ದಿದ್ದಾರೆ. ಇದೇ ವೇಳೆ ವೇಗವಾಗಿ ಬರುತ್ತಿದ್ದ ಖಾಸಗಿ ನಗರ ಸಾರಿಗೆ ಬಸ್ ಕವಿತಾಳ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ರೇಡಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕವಿತಾ ಬಾಯಿ ಮದುವೆ ಸೆ.24 ಮತ್ತು 25ರಂದು ನಿಶ್ಚಯವಾಗಿತ್ತು. ಸ್ನೇಹಿತರಿಗೆ ಮದುವೆ ಆಮಂತ್ರಣ ಪತ್ರ ನೀಡಿ, ಕೆಲಸಕ್ಕೆ ತೆರಳಿ ರಜೆ ಹಾಕಿ ಬರಲು ಸಹೋದರನ ಜತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬದವರು ಸ್ಥಳಕ್ಕೆ ದೌಡಾಯಿಸಿದರು. ಕವಿತಾ ಮೃತದೇಹ ಕಂಡು ಆಘಾತಕ್ಕೊಳಗಾದರು. ಕುಟಸ್ನೇಹಿತರು, ಪರಿಚಿತರು, ಸಂಬಂಧಿಕರು ದೊಡ್ಡ ಸಂಖ್ಯೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಬಳಿ ಆಗಮಿಸಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.