ಜಿಲ್ಲೆ

ಠಾಣೆಯಿಂದ ಎದ್ದು ಹೋದ ಯುವತಿ ಆತ್ಮಹತ್ಯೆ ಯತ್ನ

ಭದ್ರಾವತಿ: ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದ್ದ ಮಾತುಕತೆಯ ವೇಳೆ ಎದ್ದು ಹೋಗಿದ್ದ ಯುವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ತೀರ್ಥಹಳ್ಳಿಯ ಯುವತಿ ಭದ್ರಾವತಿ ಅರಳಿಹಳ್ಳಿಯ ಮಲ್ಲಿಕಾರ್ಜುನ ಎಂಬ ಯುವಕನನ್ನು ಪ್ರೀತಿಸುತ್ತಿದ್ದು ಇತ್ತೀಚೆಗೆ ಆತ ಆಕೆಯಿಂದ ದೂರವಾಗಿದ್ದ. ಆತನನ್ನು ಠಾಣೆಗೆ ಕರೆಸಿ ನ್ಯಾಯ ಕೊಡಿಸುವಂತೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಮಲ್ಲಿಕಾರ್ಜುನ ಹಾಗೂ ಆಕೆ ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದ ವೇಳೆ ಯುವತಿ, ಮಲ್ಲಿಕಾರ್ಜುನನ ಜತೆ ಮಾತನಾಡುವುದಿದೆ ಎಂದು ಹೇಳಿ ಠಾಣೆಯಿಂದ ಹೊರ ಹೋಗಿದ್ದು ಸಮೀಪದ ವಿದ್ಯಾಮಂದಿರದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ವಿಷ ಸೇವಿಸಿದ್ದ ಯುವತಿಯನ್ನು ಪೊಲೀಸರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಆಕೆಯ ವಿರುದ್ಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.