ಮರದಲ್ಲಿ ಅಸ್ವಸ್ಥಗೊಂಡವರನ್ನು ಕ್ರೇನ್ ಮೂಲಕ ಇಳಿಸಲಾಯಿತು. 
ಜಿಲ್ಲೆ

ಮರ ಕಡಿಯಲು ಏರಿದಾತನಿಗೆ ಇಳಿಯಲಾಗಲಿಲ್ಲ… ಕ್ರೇನ್ ಬಳಸಿ ಇಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಕಿನ್ನಿಗೋಳಿ: ಮರ ಕಡಿಯಲು ಏರಿದ ಯುವಕ ಮರದಲ್ಲೇ ತಲೆತಿರುಗಿ ಅಸ್ವಸ್ಥಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿದ್ದ ಆತನನ್ನು ಕ್ರೇನ್ ಮೂಲಕ ರಕ್ಷಿಸಿದ ಘಟನೆ ಮುಖ್ಯರಸ್ತೆಯ ಚರ್ಚ್ ಬಳಿ ಬುಧವಾರ ನಡೆದಿದೆ.

ಕಿನ್ನಿಗೋಳಿ ಪಟ್ಣಣ ಪಂಚಾಯಿತಿ ಮನವಿಯಂತೆ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಡಿಯುತ್ತಿದ್ದರು. ಈ ಸಂದರ್ಭ ಮರ ಕಡಿಯಲು ಕೆಮ್ಮಡೆ ನಿವಾಸಿ ಹರೀಶ್ ಮತ್ತು ಮತ್ತೊಬ್ಬ ಯುವಕ ಮರ ಏರಿದ್ದರು. ಮರ ಏರಿದ್ದ ಹರೀಶ್ ಅವರಿಗೆ ತಲೆತಿರುಗಿ ಅಸ್ವಸ್ಥಗೊಂಡಿದ್ದರು. ಮರದಿಂದ ಇಳಿಯಲು ಸಾಧ್ಯವಾಗದಿದ್ದಾಗ ಅರಣ್ಯಾಧಿಕಾರಿಗಳಿಗೆ ಮತ್ತು ಪಂಚಾಯಿತಿ ಸಿಬ್ಬಂದಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅದೇ ಸಂದರ್ಭ ರಸ್ತೆಯಲ್ಲಿ ಸಾಗುತ್ತಿದ್ದ ಏಳಿಂಜೆಪಟ್ಟೆ ನಿವಾಸಿ ವಿಜಯ ಅಮೀನ್ ಕೂಡಲೇ ಹಗ್ಗದ ಸಹಾಯದಿಂದ ಮರವನ್ನೇರಿ ಹರೀಶ್ ಅವರ ಸೊಂಟಕ್ಕೆ ಮತ್ತು ಮರಕ್ಕೆ ಹಗ್ಗವನ್ನು ಬಿಗಿದು ಕೆಳಗೆ ಬೀಳದಂತೆ ನೋಡಿಕೊಂಡರು. ನಂತರ ಅರಣ್ಯಾಧಿಕಾರಿಗಳು ಕ್ರೇನ್ ತಂದು ಹರೀಶ್ ಅವರನ್ನು ಕೆಳಗಿಳಿಸಿದರು.