ರವಿಕುಮಾರ್ 
ಜಿಲ್ಲೆ

ನಾಲೆಯಲ್ಲಿ ಕೊಚ್ಚಿ ಹೋದ ಯುವಕ

ಕೆ.ಎಂ.ದೊಡ್ಡಿ: ಸಮೀಪದ ಕಾರ್ಕಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ವೇಳೆ ವ್ಯಕ್ತಿಯೊಬ್ಬ ನೀರು ಪಾಲಾಗಿದ್ದಾರೆ.

ಕಾರ್ಕಳ್ಳಿ ಗ್ರಾಮದ ಬಸವರಾಜು ಅವರ ಪುತ್ರ ರವಿಕುಮಾರ್ (40) ಮೃತಪಟ್ಟ ದುರ್ದೈವಿ. ಮೃತನ ಶವವನ್ನು ಗ್ರಾಮದ ಯುವಕರು ಮಂಗಳವಾರ ಬೆಳಗ್ಗೆ ನೀರಿನಿಂದ ಹೊರ ತೆಗಿದಿದ್ದಾರೆ. ಗೌರಿ-ಗಣೇಶ ಹಬ್ಬದ ಅಂಗವಾಗಿ ಕಾರ್ಕಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ವಿಸರ್ಜನೆ ಅಂಗವಾಗಿ ಸೋಮವಾರ ಸಂಜೆ ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಕೂಡ ನಡೆಸಲಾಗಿತ್ತು. ಮಧ್ಯರಾತ್ರಿ ಕ್ಯಾತಘಟ್ಟ ಗ್ರಾಮದ ಬಳಿಯ ಹೆಬ್ಬಾಳ ನಾಲೆಗೆ ವಿಸರ್ಜನೆ ಮಾಡಲು 20 ರಿಂದ 30 ಜನ ಆಗಮಿಸಿ ಪೂಜೆ ಸಲ್ಲಿಸಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ನೀರಿಗೆ ಇಳಿದು ಗಣೇಶನನ್ನು ವಿಸರ್ಜನೆ ಮಾಡಿದ್ದಾರೆ.

ಈ ವೇಳೆ ನೀರಿನ ವೇಗದ ರಭಸಕ್ಕೆ ರವಿಕುಮಾರ್ ಎನ್ನುವವರು ಕೊಚ್ಚಿ ಹೋಗಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಸ್ಥಳೀಯರು ರವಿಕುಮಾರ್ ಅವರನ್ನು ರಕ್ಷಣೆಗೆ ಮಾಡಲು ಮುಂದಾದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ಮಂಗಳವಾರ ಮುಂಜಾನೆಯಿಂದಲೇ ಕೆ.ಎಂ.ದೊಡ್ಡಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಾರ್ಕಳ್ಳಿ ಗ್ರಾಮದ ಯುವಕರ ಜತೆಗೂಡಿ ಕಾರ್ಯಾಚರಣೆ ನಡೆಸಿ ರವಿಕುಮಾರ್ ಮೃತದೇಹವನ್ನು ನೀರಿನಿಂದ ಹೊರತೆಗಿಯಲಾಯಿತು.

ನಂತರ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.