ಜಿಲ್ಲೆ

ಪಾರ್ಟಿ ಬಿಲ್​ ಕೊಡದ್ದಕ್ಕೆ ಯುವಕನ ಕೊಲೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : ಹುಟ್ಟುಹಬ್ಬದ ಪಾರ್ಟಿ ವಿಚಾರದಲ್ಲಿ ಶುರುವಾದ ಗಲಾಟೆಯಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ವಡ್ಡರ ಪಾಳ್ಯದ ನಿವಾಸಿ ಸಂದೀಪ್​ (23) ಕೊಲೆಯಾದವ. ಅದೇ ಗ್ರಾಮದ ಆರೋಪಿಗಳಾದ ಸಂತೋಷ್​ (23), ಸಾಗರ್​ (25)ನನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?: ಅ.16ರಂದು ಸಂದೀಪ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಈ ನಿಮಿತ್ತ ಸುರಗಜಕ್ಕನಹಳ್ಳಿ ಬಳಿಯ ಬಾರ್​ ಒಂದರಲ್ಲಿ ಪಾರ್ಟಿ ಮಾಡಲು ಸ್ನೇಹಿತರ ಜತೆ ತೆರಳಿದ್ದ. ಎಂಟು ಸಾವಿರ ಹಣ ಬಿಲ್​ ಕಟ್ಟಬೇಕಿತ್ತು. ಆದರೆ ಸಂದೀಪ್​ ಬಳಿ ನಾಲ್ಕು ಸಾವಿರ ಮಾತ್ರ ಇತ್ತು. ಉಳಿದ ಹಣವನ್ನು ಸ್ನೇಹಿತರೇ ಕಟ್ಟಿದರು. ಇದಾದ ಬಳಿಕ ಜಿಗಣಿ ಬಳಿಯ ವಡ್ಡರ ಪಾಳ್ಯದ ವಾಲಿಬಾಲ್​ ಮೈದಾನದಲ್ಲಿ ಸಂದೀಪ್​ ಪುನ@ ಪಾರ್ಟಿ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಇಬ್ಬರು ಸ್ನೇಹಿತರು, ಬಿಲ್​ ಕಟ್ಟಲು ಹಣ ಇಲ್ಲ ಎಂದು ಹೇಳಿ, ಇಲ್ಲಿ ಸ್ನೇಹಿತರ ಜತೆ ಪಾರ್ಟಿ ಮಾಡಲು ಹಣ ಹೇಗೆ ಬಂತು ಎಂದು ಗಲಾಟೆ ಮಾಡಿ ಸಂದೀಪ್​ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂದೀಪ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಮನೆಗೆ ಹೋದ ಎರಡು ದಿನದ ಬಳಿಕ ತಲೆಯ ಒಳಗೆ ರಕ್ತ ಹೆಪ್ಪುಗಟ್ಟಿ ಹೊಟ್ಟೆಯಲ್ಲಿ ಗಂಭೀರ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಗಳವಾರ ರಾತ್ರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಇದಕ್ಕೂ ಮೊದಲು ಗಲಾಟೆ ಕುರಿತು ಸಂದೀಪ್​ ಪಾಲಕರು ಜಿಗಣಿ ಠಾಣೆಯಲ್ಲಿ ಹಲ್ಲೆ ದೂರು ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಬ್ಬರು ಸಹೋದರರು ಎನ್ನಲಾಗಿದೆ.

ಬ್ಯಾಂಕಾಕ್​ನಿಂದ ಡ್ರಗ್ಸ್​ ಕಳ್ಳಸಾಗಣೆ

ದೇವನಹಳ್ಳಿ: ಬ್ಯಾಂಕಾಕ್​ನಿಂದ ಭಾರತಕ್ಕೆ ಡ್ರಗ್ಸ್​ ಕಳ್ಳಸಾಗಣೆ ಮಾಡುತ್ತಿದ್ದುದ್ದನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೂಟ್​ಕೇಸ್​ ತರಹದ ಬ್ಯಾಗ್​ನ ಕೆಳಭಾಗದಲ್ಲಿ ಎರಡೂವರೆ ಕೆಜಿಯಷ್ಟು ಡ್ರಗ್ಸ್​ ಅಂಟಿಸಿ ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಏರ್​ಪೋರ್ಟ್​ ಸಿಬ್ಬಂದಿ ತಪಾಸಣೆ ಮಾಡಿ ವಶಕ್ಕೆ ಪಡೆದಿದ್ದಾರೆ. ಏರ್​ ಪೋರ್ಟ್​ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.