ಶಿವಮೊಗ್ಗ: ಅನೈತಿಕ ಸಂಬಂಧ ಬಿಡುವಂತೆ ಬುದ್ಧಿವಾದ ಹೇಳಿದವನ ಮೇಲೆ ಸಿನಿಮೀಯ ರೀತಿ ರಸ್ತೆ ಅಪಘಾತಪಡಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದಾರೆ.
ಚಿಕ್ಕಮಾಗಡಿ ಲಂಬಾಣಿ ತಾಂಡಾದ ಮಂಜುನಾಯ್ಕ (26) ಬಂಧಿತ ಆರೋಪಿ. ಅದೇ ತಾಂಡಾದ ಚಂದ್ರಾನಾಯ್ಕಾ (28) ಎಂಬಾತ ಕೊಲೆಯಾಗಿದ್ದು ಆತನ ಭಾವ ಶಂಕ್ರಾನಾಯ್ಕಾ ಗಾಯಗೊಂಡಿದ್ದಾರೆ. ಆ.27ರಂದು ಶಂಕ್ರಾನಾಯ್ಕಾ ಮತ್ತು ಬಾಮೈದ ಚಂದ್ರಾನಾಯ್ಕಾ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆ ದೇವಸ್ಥಾನ ಮತ್ತು ಹಾನಗಲ್ ಸಮೀಪದ ನಾಕ ಕ್ಲಾಸ್ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿ ರಾತ್ರಿ 9ರ ಸುಮಾರಿಗೆ ಶಿಕಾರಿಪುರಕ್ಕೆ ಬಂದು ಬೈಕ್‌ನಲ್ಲಿ ಊರಿಗೆ ಮರಳುವಾಗ ಕಾರಿನಲ್ಲಿ ಹಿಂಬಾಲಿಸಿದ್ದ ಮಂಜುನಾಯ್ಕ ಡಿಕ್ಕಿ ಹೊಡೆಸಿದ್ದ
ಚಂದ್ರಾನಾಯ್ಕಾ ಮತ್ತು ಶಂಕ್ರಾನಾಯ್ಕಾ ರಸ್ತೆ ಪಕ್ಕ ಬಿದ್ದು ಗಾಯಗೊಂಡಿದ್ದರು. ಸ್ವಲ್ಪ ದೂರ ತೆರಳಿ ಪುನಃ ಕಾರು ಹಿಂದಿರುಗಿಸಿಕೊಂಡು ಬಂದು ಚಂದ್ರಾನಾಯ್ಕಾನ ಮೇಲೆ ಹಾಗೂ ಶಂಕ್ರಾನಾಯ್ಕಾನ ಕಾಲು ಮೇಲೆ ಹತ್ತಿಸಿ ಕೊಲೆಗೆ ಯತ್ನಿಸಿದ್ದ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದು ಚಂದ್ರಾನಾಯ್ಕಾ ಸ್ಥಳದಲ್ಲೇ ಮೃತಪಟ್ಟಿದ್ದನು.
ಹಿಂಬದಿಯಿಂದ ಕಾರಿನಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಾಗ ಕಾರಿನ ಮುಂದಿನ ನಂಬರ್ ಪ್ಲೇಟ್ ತುಂಡಾಗಿ ಅಪಘಾತದ ಸ್ಥಳದಲ್ಲಿ ಬಿದ್ದಿತ್ತು. ಅಲ್ಲದೆ, ಶಂಕ್ರಾನಾಯ್ಕಾ ಕೂಡ ಕಾರು ಚಲಾಯಿಸುತ್ತಿದ್ದವನು ಮಂಜುನಾಯ್ಕ ಎಂಬುದನ್ನು ರಾತ್ರಿಯೇ ಗುರುತಿಸಿದ್ದ. ಆದರೆ ಅಪಘಾತದಿಂದ ಶಾಕ್‌ಗೆ ಒಳಗಾಗಿದ್ದ ಆತ ಪೊಲೀಸರ ಬಳಿ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರಿಗೆ ಕಾರಿನ ನಂಬರ್ ಪ್ಲೇಟ್ ಸುಳಿವು ನೀಡಿತ್ತು. ನಂಬರ್ ಪ್ಲೇಟ್ ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಂಕ್ರಾನಾಯ್ಕಾನ ಹೇಳಿಕೆ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಮಂಜುನಾಯ್ಕನನ್ನು ಬಂಧಿಸಿದ್ದಾರೆ.
ಅನೈತಿಕ ಸಂಬಂಧವನ್ನು ಬಿಡುವಂತೆ ಗ್ರಾಮದಲ್ಲಿ ಹಲವರು ಮಂಜುನಾಯ್ಕನಿಗೆ ಬುದ್ಧಿವಾದ ಹೇಳಿದ್ದರು. ಆದರೂ ಆತ ಯಾರ ಮಾತನ್ನೂ ಕೇಳದೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಮುಂದುವರಿಸಿದ್ದ. ಮಂಜುನಾಯ್ಕನ ಚಿಕ್ಕಮ್ಮ ಮತ್ತು ಚಿಕ್ಕಪ್ಪನಿಗೆ ಈ ಬಗ್ಗೆ ಶಂಕ್ರಾನಾಯ್ಕಾ ಮತ್ತು ಚಂದ್ರಾನಾಯ್ಕಾ ತಿಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ಮಂಜುನಾಯ್ಕ ಕೊಲೆಗೆ ಸ್ಕೆಚ್ ಹಾಕಿದ್ದ. ಹಲವು ದಿನಗಳಿಂದ ಶಂಕ್ರಾನಾಯ್ಕಾ ಮತ್ತು ಚಂದ್ರಾನಾಯ್ಕಾನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ. ಇಬ್ಬರನ್ನು ಹತ್ಯೆ ಮಾಡಿದರೆ ತನ್ನ ದಾರಿ ಸುಗಮ ಆಗಲಿದೆ ಎಂದು ಭಾವಿಸಿ ಇಬ್ಬರನ್ನೂ ಮುಗಿಸಲು ಪ್ಲಾೃನ್ ಹಾಕಿದ್ದ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಆರೋಪಿ ಮಂಜುನಾಯ್ಕ ರಸ್ತೆ ಅಪಘಾತವನ್ನು ಹಿಟ್ ಆ್ಯಂಡ್ ರನ್ ಮಾದರಿಯಲ್ಲಿ ಯೋಜನೆ ಹಾಕಿದ್ದ. ಹೀಗೆ ಮಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬುದು ಆತನ ಯೋಚನೆಯಾಗಿತ್ತು. ಹಾಗಾಗಿಯೇ ಆ.27ರಂದು ಕಾದು ಕುಳಿತಿದ್ದ ಮಂಜುನಾಯ್ಕ ತನ್ನದೇ ಕಾರಿನಿಂದ ಬೈಕ್‌ನಲ್ಲಿ ಒಟ್ಟಿಗೆ ತೆರಳಿದ್ದ ಇಬ್ಬರ ಮೇಲೆ ಕಾರು ಹರಿಸಿದ್ದನು.