ಶಿವಕುಮಾರ ಶಶಿಮಠ ಗಜೇಂದ್ರಗಡ
ಆಧುನಿಕತೆಯ ಒತ್ತಡದ ದಿನಗಳಲ್ಲಿ ದೈಹಿಕ, ಮಾನಸಿಕ ಆರೋಗ್ಯದ ಸಮತೋಲನಕ್ಕಾಗಿ ಯೋಗದ ಮೊರೆ ಹೋಗುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಇಡೀ ಜಗತ್ತು ಭಾರತದ ಪ್ರಾಚೀನ ಕೊಡುಗೆಯಾಗಿರುವ ಯೋಗವನ್ನು ಅಳವಡಿಸಿಕೊಳ್ಳುತ್ತಿದೆ. ಪಟ್ಟಣದ ನಿವಾಸಿಯೊಬ್ಬರು ಯೋಗದಿಂದ ಹಳಿ ತಪ್ಪಿದ್ದ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಗಜೇಂದ್ರಗಡ ಪಟ್ಟಣದ ಪ್ರೇಮನಾಥಸಾ ರಾಮದಾಸಸಾ ದಲಬಂಜನ ಅವರು ಪ್ರಾರಂಭದಲ್ಲಿ ಟೇಲರಿಂಗ್ ವೃತ್ತಿಯಲ್ಲಿ ತೊಡಗಿದ್ದರು. ಅಲ್ಲಿ ಬರುತ್ತಿದ್ದ ಆದಾಯದಲ್ಲಿ ಕುಟುಂಬದ ನಿರ್ವಹಣೆ ಆಗದೆ ಆ ವೃತ್ತಿಯನ್ನು ತೊರೆದರು.
ಮುಂದೆ ಏನು ಮಾಡಬೇಕು ಎಂದು ಚಿಂತೆಗೀಡಾಗಿ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಖಿನ್ನತೆ, ನಿರಾಸೆಗಳು ಬದುಕಿನಲ್ಲಿ ದಾಳಿ ಇಟ್ಟವು. ಇದರ ಪರಿಣಾಮ ಹಲವು ಚಟಗಳ ದಾಸರಾಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು.
ದುಶ್ಚಟಗಳಿಂದ ಆರೋಗ್ಯ ಕೈಕೊಟ್ಟಿತು. ಆಸ್ಪತ್ರೆಗೆ ಅಲೆದಾಟ ಶುರುವಾಯಿತು. ವೈದ್ಯರು ಇವರು ಹೆಚ್ಚು ದಿನ ಬದುಕುವುದಿಲ್ಲ ಎಂದು ಕೈಚೆಲ್ಲಿದ್ದರು. ಆದರೆ, ಪಾವಾಡವೆಂಬಂತೆ ಈಗ ಫಿಟ್ ಆಗಿದ್ದಾರೆ. ಹಸನ್ಮುಖಿ ಸದಾ ಸುಖಿ ಎಂಬ ಗಾದೆ ಮಾತು ಇವರನ್ನು ನೋಡಿದರೆ ನೆನಪಾಗುತ್ತಿದೆ. ಈ
ಬದಲಾವಣೆಗೆ ಕಾರಣವಾಗಿದ್ದು ಅವರ ರೂಢಿಸಿಕೊಂಡ ಯೋಗಾಭ್ಯಾಸ.
ದುಶ್ಚಟಗಳ ಕಬಂಧ ಬಾಹುಗಳಿಂದ ಬಿಡಿಸಿಕೊಂಡು, ಗಟ್ಟಿ ಮನಸು ಮಾಡಲು ಪ್ರೇರಣೆ ನೀಡಿದ್ದೇ ನಿರಂತರ ಯೋಗಾಸನ. ದೈಹಿಕ, ಮಾನಸಿಕವಾಗಿ ಜರ್ಜರಿತರಾಗಿದ್ದ ಅವರಿಗೆ ಹಿತೈಷಿಗಳಾದ ವೀರೇಶ ಗಾಳಿ ಅವರು ಯೋಗಾಭ್ಯಾಸದ ಸಲಹೆ ನೀಡಿದ್ದರು.
ಯೋಗ ನನ್ನ ಜೀವನನ್ನೇ ಬದಲಾಯಿಸಿದೆ. ಯೋಗ ಎಂಬುದು ಅದ್ಭುತ ಶಕ್ತಿ. ಯುವಕರು ದುಶ್ಚಟಗಳ ದಾಸರಾಗದೇ ಯೋಗದ ಹವ್ಯಾಸ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಬಹುದು. ಯೋಗ ನಿಂತ ನೀರಾಗಬಾರದು. ಯಾರಾದರೂ ಸಾರ್ವಜನಿಕರಿಗೆ ಯೋಗ ಕಲಿಸಲು ಅವಕಾಶ ಕಲ್ಪಿಸಿದರೆ ಉಚಿತವಾಗಿ ಹೇಳಿಕೊಡುವೆ. - ಪ್ರೇಮನಾಥಸಾ ದಲಬಂಜನ