ಮಂಗಳೂರು: ಯಕ್ಷಗಾನದ ಮೇರು ಕಲಾವಿದ ಸಂಪಾಜೆ ಶೀನಪ್ಪ ರೈ (78) ಮಂಗಳವಾರ ಬೆಳಗ್ಗೆ ನಿಧನರಾದರು.
ಯಕ್ಷರಂಗದಲ್ಲಿ ರಕ್ತಬೀಜ, ಹಿರಣ್ಯಾಕ್ಷ ,ಶಿಶುಪಾಲ ಮುಂತಾದ ಎದುರು ವೇಷಗಳಿಗೆ ಹೊಸ ಭಾಷ್ಯವನ್ನು ಬರೆದವರು ಸಂಪಾಜೆ ಶೀನಪ್ಪ ರೈ. ಶ್ರೀ ಕಟೀಲು ಮೇಳದಲ್ಲಿ ದಶಕಗಳ ಕಾಲ ತಿರುಗಾಡಿದ ರೈಗಳು ಹೊಸನಗರ ,ಎಡನೀರು ಹಾಗೂ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯ ಮಾಡಿದ್ದರು.
ಯಕ್ಷಗಾನ ರಂಗದಲ್ಲಿ ಒಟ್ಟು 59 ವರ್ಷ ತಿರುಗಾಟ ನಡೆಸಿದ್ದರು. ರಂಗಸ್ಥಳದಲ್ಲಿ ಅಬ್ಬರದ ರಕ್ಕಸವೇಷಗಳಿಂದ ಯಕ್ಷ ಪ್ರೇಮಿಗಳನ್ನು ರಂಜಿಸುತ್ತಿದ್ದ ಶೀನಪ್ಪ ರೈಗಳು ವೃದ್ಧಾಪ್ಯದ ಕಾಲದಲ್ಲಿ ದೇಹದ ಅನಾರೋಗ್ಯಕ್ಕೆ ತುತ್ತಾಗಿ ಕಷ್ಟ ಪಡುವಂತಾಯಿತು. ಸಂಪಾಜೆಯವರಾದರೂ ಕೂಡ ಮಂಗಳೂರು ಬಳಿಯ ಸುರತ್ಕಲ್ನ ಪುತ್ರನ ಮನೆಯಲ್ಲಿ ಜೀವಿತದ ಕೊನೆಯ ಕಾಲವನ್ನು ಕಳೆದ ಸಂಪಾಜೆ ಶೀನಪ್ಪ ರೈಗಳು ಇನ್ನು ನೆನಪು ಮಾತ್ರ.