ಜಿಲ್ಲೆ

ಧರೆಗಿಳಿದ ಚಿಣ್ಣರ ಲೋಕ: ‘ಸಮರಸ’ ರಥದೊಂದಿಗೆ ಚಿಣ್ಣರ ಮೇಳಕ್ಕೆ ಚಾಲನೆ

ಮೈಸೂರು: ಇಳಿಸಂಜೆ ಹೊತ್ತಿನಲ್ಲಿ ವನರಂಗದಲ್ಲಿ ಅಕ್ಷಶಃ ಚಿಣ್ಣರ ಲೋಕವೇ ಧರೆಗಿಳಿದು ಬಂದ ಅನುಭವ..! ಹಾಡು, ನಲಿವು, ಕುಣಿತ ಹೀಗೆ ಮುಕ್ತ ಭಾವಲೋಕದಲ್ಲಿ ವಿಹರಿಸಿದ ಮಕ್ಕಳು ಚಿಲಿಪಿಲಿ ಮೇಳೈಸಿತ್ತು. ಇದನ್ನು ಕಣ್ತುಂಬಿಕೊಂಡ ಪಾಲಕರು ಸಹ ಸಂತಸದಿಂದ ಹಿರಿಹಿರಿ ಹಿಗ್ಗಿದರು.


ಇದನ್ನು ಚಿಣ್ಣರ ಮೇಳ ಸಾಕ್ಷೀಕರಿಸಿತು. ಪ್ರತಿ ವರ್ಷ ಆಯೋಜಿಸಿರುವ ಬೇಸಿಗೆ ಶಿಬಿರಕ್ಕೆ ‘ಸಮರಸವೇ ಜೀವನ’ ರಥವನ್ನು ಗಣ್ಯರು ಎಳೆಯುವ ಮೂಲಕ ಚಾಲನೆ ನೀಡಿದರು. ಈ ಸಂದೇಶವೇ ಶಿಬಿರದ ಈ ಬಾರಿಯ ಆಶಯ. ಇದು ರಂಗಾಯಣ ಹಮ್ಮಿಕೊಂಡಿರುವ 25ನೇ ಶಿಬಿರ.


ವಿವಿಧೆಡೆಯಿಂದ ಬಂದಿರುವ 300 ಶಿಬಿರಾರ್ಥಿ ಮಕ್ಕಳು ನಾಟಕ, ನೃತ್ಯ, ಜಾನಪದ ಹೀಗೆ ವಿವಿಧ ಕಲೆಗಳನ್ನು ಇಲ್ಲಿ ಕಲಿಸಿಕೊಡುವ ಮೂಲಕ ಪರಿಚಯಿಸಲಾಗುತ್ತದೆ. ರಾತ್ರಿ ಇಡೀ ರಂಗಾಯಣದ ಬೀದಿಯಲ್ಲಿ ಕಾಯ್ದು ಶಿಬಿರದ ಪ್ರವೇಶ ಅರ್ಜಿ ಪಡೆದ ಪಾಲಕರ ಮುಖದಲ್ಲಿ ಮಂದಹಾಸ ಎದ್ದುಕಾಣುತ್ತಿತ್ತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿರುವ ಬಾಲರಂಗ ಕಲಾವಿದ ಗೋಕುಲ ಸಹೃದಯ ಮಾತನಾಡಿ, ನಾಟಕದಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ ಎಂಬುದು ಶುದ್ಧ ಸುಳ್ಳು. ಬದಲಿಗೆ ಏಕಾಗ್ರತೆ, ಸಮಯಪ್ರಜ್ಞೆ, ಶಿಸ್ತು, ನಿಸರ್ಗದ ಮೇಲಿನ ಪ್ರೀತಿ ಬೆಳೆಯುತ್ತದೆ. ಆದ್ದರಿಂದ ಈ ಕಲೆಯನ್ನು ಕಲಿಯಲು ಉತ್ತೇಜನ ನೀಡಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.


ನನಗೆ ರಂಗಭೂಮಿಯೇ ಶಾಲೆ, ಅದುವೇ ನನಗೆ ಸ್ನೇಹಿತ. 10 ವರ್ಷದಿಂದ ಅಭಿನಯಿಸುತ್ತಿರುವೆ. ಅನೇಕ ಅವಕಾಶಗಳು ದೊರೆತಿವೆ. ಎಲ್ಲರಿಗೂ ಕಲೆ ಇಷ್ಟ. ಅದನ್ನು ಒಲಿಸಿಕೊಳ್ಳಲು ಪರಿಶ್ರಮ ಪಡಬೇಕು. ಕಷ್ಟವನ್ನೂ ಸಹಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.


ನಾಟಕ ವಿದ್ಯುತ್ ಲೈಟ್‌ನಂತೆ. ನಿರ್ದೇಶಕರು, ರಂಗವಿನ್ಯಾಸಕಾರರು ಸೇರಿದಂತೆ ಇತರರು ತಂತಿ ಇದ್ದಂತೆ. ಇವರು ಇದ್ದರೆ ಮಾತ್ರ ನಾಟಕ ಪ್ರಜ್ವಲಿಸಲು ಸಾಧ್ಯ. ಎಲ್ಲರೂ ಇಲ್ಲಿ ಮುಖ್ಯ. ರಂಗಭೂಮಿಗೆ ಭಾಷೆ, ಮಾಧ್ಯಮ ಇಲ್ಲ ಎಂದರು.


ರಂಗಕಲಾವಿದೆ ಎಂ.ಎಸ್.ನುಡಿ ಮಾತನಾಡಿ, ಆಧುನಿಕ ಮಕ್ಕಳಲ್ಲಿ ಬಹು ಆಯಾಮ ಚಿಂತನೆ ಬೆಳೆಸಬೇಕಾಗಿದೆ. ಇದು ವೃತ್ತಿ ಮತ್ತು ಜೀವನದಲ್ಲಿ ಮುಖ್ಯ. ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.


ಈ ಚಿಂತನೆ ಜೀವನ ಕಟ್ಟಿಕೊಳ್ಳಲೂ ಸಹಾಯವಾಗಲಿದೆ. ವ್ಯಕ್ತಿತ್ವ ವಿಕಸನವೂ ಆಗಲಿದೆ. ಜತೆಗೆ, ಪ್ರಜಾಸತ್ತಾತ್ಮಕ ಚಿಂತನೆಯನ್ನೂ ಬೆಳೆಸಬೇಕಾಗಿದೆ. ಇದು ಭವಿಷ್ಯದಲ್ಲಿ ಕೆಲಸ ಮತ್ತು ಸಮಾಜದಲ್ಲಿ ಪ್ರಾಮಾಣಿಕ ಮೌಲ್ಯಮಾಪನ ಮಾಡಲು ಪೂರಕವಾಗಲಿದೆ ಎಂದರು.


ಟಿವಿ, ಮೊಬೈಲ್‌ನಿಂದ ಮಕ್ಕಳನ್ನು ದೂರ ಇಡುವುದು ಸವಾಲಿನ ಕೆಲಸ. ಕಾಲದೊಂದಿಗೆ ನಾವುಗಳೂ ಸಾಗಬೇಕಿದೆ. ಇದರೊಂದಿಗೆ ಸಂವೇದನಶೀಲತೆಯನ್ನೂ ವೃದ್ಧಿಸಬೇಕು. ಅಂತರ್ಜಾಲದ ಮೂಲಕ ದೊರೆಯುವ ಅಗಾಧವಾದ ಮಾಹಿತಿಯನ್ನು ವಿಶ್ಲೇಷಣೆ, ಸರಿ-ತಪ್ಪುಗಳ ತಿಳಿಸುವ ಕುರಿತು ಮಾರ್ಗದರ್ಶನವನ್ನೂ ಮಾಡಬೇಕಿದೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.


25 ವರ್ಷಗಳ ಹಿಂದೆ ಚಿಣ್ಣರ ಮೇಳದಲ್ಲಿ ಪಾಲ್ಗೊಂಡ ದಿನಗಳು, ಕಲಿತ ಸಂಗತಿ, ಅದು ಜೀವನದಲ್ಲಿ ಹೇಗೆ ಅನುಕೂಲವಾಯಿತು ಎಂಬ ಸಂಗತಿಗಳನ್ನು ಹಂಚಿಕೊಂಡರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಶಿಕ್ಷಣ ಅಂಕ ಮತ್ತು ಸ್ಪರ್ಧಾತ್ಮಕತೆಯನ್ನು ಕಲಿಸಿದರೆ ಚಿಣ್ಣರ ಮೇಳವು ಮಕ್ಕಳಲ್ಲಿ ಆತ್ಮಸ್ಥೈರ್ಯ ಬಿತ್ತಲಿದೆ. ಜತೆಗೆ, ಸಮಾನತೆ, ಭ್ರಾತೃತ್ವವನ್ನೂ ಕಲಿಸಲಿದೆ. ಆದ್ದರಿಂದ ಮಕ್ಕಳು ಪೂರ್ಣ ಪ್ರಮಾಣದಲ್ಲಿ ಶಿಬಿರವನ್ನು ಸವಿಯಲು ಪಾಲಕರು ಉತ್ತೇಜನ ನೀಡಬೇಕು ಎಂದರು.


ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಚಿಣ್ಣರ ಮೇಳ ಮಕ್ಕಳಿಗೆ ಹೊಸ ಉತ್ಸಾಹ ತುಂಬಲಿದೆ. ಪರಸ್ಪರ ಪ್ರೀತಿ, ಸಂತೋಷ ಹಂಚಿಕೊಳ್ಳುವುದನ್ನೂ ಕಲಿಸಲಿದೆ. ಸಾಂಸ್ಕೃತಿಕ ಮತ್ತು ಗುಂಪು ಚಟುವಟಿಕೆಗಳ ಮೂಲಕ ಮನಸ್ಸನ್ನು ಹಗುರ ಮಾಡಲಿದೆ. ಸಾಮರಸ್ಯ ಅಂದರೆ ನಾವು ಬದುಕುವ ಜತೆಗೆ ಇತರರನ್ನು ಬದುಕಲು ಬಿಡಬೇಕು. ಎಲ್ಲರೊಳಗೆ ಒಂದಾಗಬೇಕು ಎಂದರು. ಚಿಣ್ಣರ ಮೇಳದ ಸಂಚಾಲಕಿ ಗೀತಾ ಮೊಂಟಡ್ಕ ಇದ್ದರು.