ಬೇಲೂರು ತಾಲೂಕಿನ ಅರೇಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಾಯೋಗಿಕ ಚಟುವಟಿಕೆ ಕಾರ್ಯಾಗಾರ ಆಯೋಜಿಸಲಾಗಿತ್ತು. 
ಜಿಲ್ಲೆ

ವಿದ್ಯಾರ್ಥಿಗಳ ಅನುಕೂಲಕ್ಕೆ ಪ್ರಾಯೋಗಿಕ ಕಾರ್ಯಾಗಾರ

ನಾಗೇಶ ಎಸ್

ಬೇಲೂರು: ಪ್ರಯೋಗಾಲಯದ ಚಟುವಟಿಕೆಗಳನ್ನು ಪ್ರಾತ್ಯಕ್ಷಿಕವಾಗಿ ನೋಡಿ ಕಲಿಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅರೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಿ.ಎಂ.ಪರಮಶಿವಪ್ಪ ಹೇಳಿದರು.

ತಾಲೂಕಿನ ಅರೇಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ಅರೇಹಳ್ಳಿ, ನಾರ್ವೆ ಹಾಗೂ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಆಯೋಜಿಸಿದ್ದ ಮೂರು ದಿನಗಳ ಪ್ರಯೋಗಾಲಯದ ಚಟುವಟಿಕೆಗಳ ಪ್ರಾತ್ಯಕ್ಷಿಕೆ ಪ್ರಾಯೋಗಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಶಾಲೆಗಳಲ್ಲಿ ಅನುದಾನದ ಕೊರತೆಯಿಂದ ವಿಜ್ಞಾನ ಪ್ರಯೋಗಾಲಯ ಇಲ್ಲ. ಒಂದು ವೇಳೆ ಪ್ರಯೋಗಾಲಯ ಕೊಠಡಿ ಇದ್ದರೂ ಪ್ರಯೋಗಕ್ಕೆ ಬೇಕಾದ ಅಗತ್ಯ ಪರಿಕರಗಳು ಲಭ್ಯವಿಲ್ಲ. ಈ ನಿಟ್ಟಿನಲ್ಲಿ ಅರೇಹಳ್ಳಿ ಸರ್ಕಾರಿ ಕಾಲೇಜಿನ ವಿಜ್ಞಾನದ ಮೂರು ವಿಭಾಗಗಳ ಉಪನ್ಯಾಸಕರು ವಿಶೇಷ ಆಸಕ್ತಿ ವಹಿಸಿ ಜೀವಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳ ಕಾರ್ಯಾಗಾರವನ್ನು ಪ್ರತ್ಯೇಕ ಕೊಠಡಿಯಲ್ಲಿ ಪ್ರಾತ್ಯಾಕ್ಷಿಕೆ ಮೂಲಕ ತಿಳಿಸಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸುವ ವಿಜ್ಞಾನ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಗಳಿಗೆ ತೊಡಕಾದಂತೆ ಕ್ರಮವಹಿಸಲು ಸೂಚಿಸಿ, ವಿದ್ಯಾರ್ಥಿಗಳೊಂದಿಗೆ ತೆರಳಲು ಬಿಇಒ ಕೆ.ಪಿ.ನಾರಾಯಣ್ ನಿರ್ದಿಷ್ಟಪಡಿಸಿದ ದಿನಗಳಿಗೆ ಮಾತ್ರ ಅನುಮತಿ ನೀಡಿದ್ದಾರೆ ಎಂದರು.

ಕಾಲೇಜಿನ ಉಪನ್ಯಾಸಕರು, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.