ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ವೀರನ ಜಾತ್ರೋತ್ಸವದಂಗವಾಗಿ ನಡೆದ ದೇವರ ಕುಣಿತದ ವೈಭವ.  
ಜಿಲ್ಲೆ

ಬಿಸೆ ಸಹೋದರಿಯರ ಅದ್ಭುತ ನೃತ್ಯ ಪ್ರದರ್ಶನ, ಕಹಳೆ-ಹಲಗೆಯ ಸದ್ದು ಅನುರಣನ, ಬುಡಕಟ್ಟು ಆಚರಣೆಗಳ ಅನಾವರಣನ, ವೀರನ ಜಾತ್ರೋತ್ಸವ ಅದ್ದೂರಿಯಾಗಿ ಆಚರಣೆ

ವಿಜಯವಾಣಿ ಸುದ್ದಿಜಾಲ ಇಂಡಿ

ಶೌರ್ಯ-ಪರಾಕ್ರಮ ಹಾಗೂ ತ್ಯಾಗ-ಬಲಿದಾನದ ಪ್ರತೀಕವಾಗಿ ‘ವೀರ’ನ ಜಾತ್ರೋತ್ಸವ ಮಂಗಳವಾರ ಅತ್ಯಂತ ವೈಭವೋಪೇತವಾಗಿ ನೆರವೇರಿತು.

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಮುಖವಾಡ ಧರಿಸಿದ ದೈವಕ್ಕೆ ಬಡಿಗೆಯಿಂದ ಹೊಡೆಯಲು ಬರುವ ಮತ್ತು ದೈವವೂ ಪ್ರತಿರೋಧ ಒಡ್ಡುತ್ತಾ ಐತಿಹಾಸಿಕ ಘಟನೆಯೊಂದನ್ನು ಸಾಕ್ಷೀಕರಿಸುವ ಜಾತ್ರೆಯೊಂದು ಜನಮನ ಸೂರೆಗೊಂಡಿತು.

ಸುಮಾರು 12-13ನೇ ಶತಮಾನದಲ್ಲಿ ನಡೆದಿರಬಹುದೆನ್ನಲಾದ ಘಟನೆಯನ್ನಾಧರಿಸಿ ಮೂರು ವರ್ಷಗಳಿಗೊಮ್ಮೆ ನಡೆಯುವ ವೀರ ಅರ್ಥಾತ್ ವೀರಮುತ್ತೇಶ್ವರನ ಜಾತ್ರೆಯನ್ನು ಈ ಬಾರಿ ವೀರಾವೇಷದೊಂದಿಗೆ ಆಚರಿಸಲಾಯಿತಲ್ಲದೇ ಜಾತ್ರೆ ಹಿನ್ನೆಲೆ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನೆರವೇರಿದವು. ಬೆಳಗ್ಗೆ 8 ಗಂಟೆಯ ಸುಮಾರಿಗೆ ಆರಂಭವಾದ ದೇವರ ಮೆರವಣಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಗ್ರಾಮದಲ್ಲಿ ಸಂಚರಿಸಿತು.

ಮುಖವಾಡ ಕಟ್ಟಿಕೊಂಡ ರಮೇಶ ಡೊಂಗ್ರೋಜಿಗೆ ಹಳದಿ ಬಣ್ಣದಾರಿಗಳು ಬಡಿಗೆಯಿಂದ ಹೊಡೆಯುತ್ತಾ ಪ್ರತಿಯಾಗಿ ಮುಖವಾಡ ಧರಿಸಿದ ರಮೇಶ ಡೊಂಗ್ರೋಜಿ ಹೊಡೆಯುತ್ತಾ, ಕುಣಿಯುತ್ತಾ ತಾಳಕ್ಕೆ ತಕ್ಕ ಹೆಜ್ಜೆ ಹಾಕುವ ಮೂಲಕ ಗ್ರಾಮದಲ್ಲಿ ವಿಭಿನ್ನ ಹಾಗೂ ವಿಶಿಷ್ಟ ಸಂಪ್ರದಾಯ ಆಚರಿಸಿತು. ಕಹಳೆ-ಹಲಗೆ ಮೇಳ ರೋಮಾಂಚನಕಾರಿ ಅನುಭವ ನೀಡಿತು. ಮಕ್ಕಳು ಬಣ್ಣದ ಬಡಿಗೆಗೆ ಬಲೂನ್ ಕಟ್ಟಿಕೊಂಡು, ಯುವಕರು ಸಾಂಪ್ರದಾಯಿಕವಾಗಿ ತಲವಾರ್ ಹಿಡಿದುಕೊಂಡು ಬುಡಕಟ್ಟು ಜನಾಂಗದ ಪದ್ಧತಿಯಂತೆ, ಬೇಟೆಗೆ ಹೊರಡುವ ಸನ್ನಿವೇಶ ಸೃಷ್ಠಿ ಮಾಡಿತ್ತು.

ತಾಂಬಾದಿಂದ ಚೌಡೇಶ್ವರಿಯ ಕೈಯಲ್ಲಿದ್ದ ಬೆಳ್ಳಿ ಬಟ್ಟಲು ತಂದು ಹಿರೇಮಸಳಿಯ ಗ್ರಾಮದ ಕೋಟೆಗೋಡೆಯಲ್ಲಿ ಕತ್ತು ಹಾಗೂ ಕೈ ಸಿಕ್ಕಿಸಿ ತಲವಾರದಿಂದ ಕತ್ತರಿಸಿಕೊಂಡ ಹುತಾತ್ಮ ವೀರನನ್ನು ಸ್ಮರಿಸುವ ಮೂಲಕ ಜಾತ್ರೋತ್ಸವ ಸಂಪನ್ನಗೊಂಡಿತು. ಗ್ರಾಮದ ಗೌಡರು ವೀರನಿಗೆ ಗೌರವ ಸಲ್ಲಿಸಿದರೆ ವೀರನ ಸಮುದಾಯದವರು ಗೌಡರ ಗೌರವ ಸ್ವೀಕರಿಸಿ ಹುತಾತ್ಮ ವೀರನಿಗೆ ಜೈಕಾರ ಹಾಕುವ ಸನ್ನಿವೇಶ ಮೈನವಿರೇಳಿಸುಂತೆ ಮಾಡಿತು.

ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

ವಿಜಯಪುರದ ಹೆಸರಾಂತ ಸ್ವಯಂಬೋ ಆರ್ಟ್ ಫೌಂಡೇಶನ್‌ನ ಖ್ಯಾತ ಕಲಾವಿದೆಯರಾದ ದೀಕ್ಷಾ ಹಾಗೂ ದಿವ್ಯಾ ಬಿಸೆ ನೇತೃತ್ವದ ಕಲಾ ತಂಡ ಅಮೋಘ ಕಾರ್ಯಕ್ರಮ ನೀಡಿತು. ಪೂಜ್ಯ ಸಿದ್ಧೇಶ್ವರ ಶ್ರೀಗಳ ರೂಪಕ, ಜೋಗುತಿ ಹಾಡು, ಕನ್ನಡ ನಾಡು-ನುಡಿಯ ಅಭಿಮಾನ ಮೆರೆಯುವ ಅನೇಕ ಹಾಡುಗಳಿಗೆ ಹೆಜ್ಜೆ ಹಾಕಿ ಮನರಂಜಿಸಿದರು. ಭರತನಾಟ್ಯ, ಕಥಕ್ಕಳಿ, ಜಾನಪದ ನೃತ್ಯ ಪ್ರಕಾರಗಳು ಜನರ ಮನಗೆದ್ದವು. ತುಂತುರು ಮಳೆಯಲ್ಲಿಯೂ ಜನ ತಡರಾತ್ರಿವರೆಗೂ ಕಾರ್ಯಕ್ರಮ ವೀಕ್ಷಿಸಿದ್ದು ವಿಶೇಷ.

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ವೀರನ ಜಾತ್ರೋತ್ಸವದಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಮೋಘ ಪ್ರದರ್ಶನ ನೀಡಿದ ಸ್ವಯಂಬೋ ಆರ್ಟ್ ಫೌಂಡೇಶನ್ ಕಲಾವಿದರನ್ನು ಜಾತ್ರೋತ್ಸವ ಕಮಿಟಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಊರಿನ ಗಣ್ಯರಾದ ದಾದಾಗೌಡ ಪಾಟೀಲ, ಉಮೇಶಗೌಡ ಪಾಟೀಲ, ಅಲ್ಪಸಂಖ್ಯಾತರ ಮುಖಂಡ ಆರೀಫ್ ಅತ್ತಾರ, ಮುಖಂಡ ಸಂಜೀವ ಸೋಲಾಪುರ, ಅಶೋಕ ಮರಡಿ ಮತ್ತಿತರರು ಆಯುಧ ಪೂಜೆ ಮೂಲಕ ಕಾರ್ಯಕ್ರಮ ಉದ್ಗಾಟಿಸಿದರು. ವೇದಮೂರ್ತಿ ಸಂಗಯ್ಯ ಹಿರೇಮಠ ಹಾಗೂ ಬಸಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಪ್ರಕಾಶ ದೇವರಮನಿ, ಚಿದಾನಂದ ಭಾವಿಕಟ್ಟಿ, ಸಿದರಾಯ ಭಾವಿಕಟ್ಟಿ, ಭೀಮರಾಯ ಜಂಬಗಿ, ಬಸವರಾಜ ದೇವರಮನಿ, ಈರಪ್ಪ ಹಂಜಗಿ, ಶಂಕರಸಿಂಗ್ ರಜಪೂತ, ಭೋಜು ಚಾಂದಕವಟೆ, ಗಂಗು ಮರಡಿ ಹೀಗೆ ಅನೇಕರು ಭಾಗವಹಿಸಿದ್ದರು. ಪ್ರಶಾಂತ ಬೀಳಗಿಮಠ ನಿರೂಪಿಸಿದರು.