ಜಿಲ್ಲೆ

ಸಲಿಕೆಯಿಂದ ಹೊಡೆದು ಮಹಿಳೆ ಕೊಲೆ

ಮುಳಗುಂದ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಆರಂಭವಾದ ಜಗಳದಲ್ಲಿ ಜೈಬುನ್ನಿಸಾ ಕಾಶೀಮಸಾಬ್ ಕಿಲ್ಲೇದಾರ ಎನ್ನುವ ಮಹಿಳೆ ಮೇಲೆ ಮಲ್ಲಿಕ್‌ಸಾಬ್ ಕಿಲ್ಲೇದಾರ ಹಲ್ಲೆ ನಡೆಸಿ ಕೊಲೆಗೈದ ಘಟನೆ ಸಮೀಪದ ಕಣವಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಆಸ್ತಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಈ ಇಬ್ಬರ ನಡುವೆ ತಂಟೆ ಇತ್ತು. ಶುಕ್ರವಾರ ವಿವಾದದ ಜಾಗದಲ್ಲಿ ಮನೆಯ ಕಾಮಗಾರಿ ಮಾಡುತ್ತಿದ್ದ ವೇಳೆ ಜೈಬುನ್ನಿಸಾ ತಕರಾರು ತೆಗೆದು ಅಡ್ಡಿಪಡಿಸಿದ್ದಾರೆ. ಆರೋಪಿ ಮತ್ತು ಜೈಬುನ್ನಿಸಾ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಲ್ಲಿಕ್‌ಸಾಬ್ ಮಹಿಳೆಗೆ ಸಲಿಕೆಯಿಂದ ಹೊಡೆದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ಜೆ.ಎಚ್. ಇನಾಮದಾರ, ಗದಗ ಗ್ರಾಮೀಣ ಪಿಎಸ್‌ಐ ಎಲ್.ಕೆ. ಜೂಲಕಟ್ಟಿ, ಎಎಸ್‌ಐ ಈಶ್ವರ ಸಾಧರ ಭೇಟಿ ನೀಡಿ ಪರಿಶೀಲಿಸಿದರು.