ಮಳೆ-ಗಾಳಿಗೆ ಮರ ಬಿದ್ದ ರಭಸಕ್ಕೆ ಕಾರು ನುಜ್ಜು-ಗುಜ್ಜಾಗಿರುವುದು.  
ಜಿಲ್ಲೆ

ಮಳೆ-ಗಾಳಿಗೆ ಮರ ಉರುಳಿ ಮಹಿಳೆ ಸಾವು

ಎನ್.ಆರ್.ಪುರ: ಮಲೆನಾಡು ಭಾಗದಲ್ಲಿ ಭಾನುವಾರ ಮಧ್ಯಾಹ್ನ ಗುಡುಗು, ಸಿಡಿಲು, ಭಾರಿ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ.

ಎನ್.ಆರ್.ಪುರ ತಾಲೂಕಿನಲ್ಲಿ ತಾಲೂಕಿನ ಕಟ್ಟಿನಮನೆ ಸಮೀಪದ ಕೋಣನಗುಡ್ಡದಲ್ಲಿ ಭಾನುವಾರ ಮಳೆ, ಗಾಳಿಯಿಂದಾಗಿ ಕಾರಿನ ಮೇಲೆ ಮರ ಬಿದ್ದು ಮಹಿಳೆ ಸಾವಿಗೀಡಾಗಿದ್ದು, ಮೃತಳ ಸಹೋದರ ಹಾಗೂ ಮೂವರು ಸಹೋದರಿಯರು ಗಾಯಗೊಂಡಿದ್ದಾರೆ. ಸಹೋದರ ಮತ್ತು ಸಹೋದರಿಯರ ಜತೆ ದೇವಸ್ಥಾನಕ್ಕೆ ಆಗಮಿಸಿದ್ದ ಕೊಪ್ಪ ನಿವಾಸಿ ಸುನೀತಾ(48) ಮೃತ ದುರ್ದೈವಿ. ಕಾನೂರು ಗ್ರಾಪಂನ ಹರಾವರಿ ಗ್ರಾಮದ ಕಟ್ಟಿನಮನೆಯ ಸಂತೋಷ್‌ಕುಮಾರ್, ಗೀತಾ, ಆಶಾ, ಸಮಲತಾ ಗಾಯಗೊಂಡವರು. ಸಂತೋಷ್‌ಕುಮಾರ್ ಅವರು ನಾಲ್ವರು ಸಹೋದರಿಯರ ಜತೆ ಕೋಣನಗುಡ್ಡದಲ್ಲಿರುವ ತಮ್ಮ ಮನೆ ದೇವರಾದ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲು ಬಂದಿದ್ದರು. ಪೂಜೆ ಸಲ್ಲಿಸಿ ವಾಪಸ್ ತೆರಳಬೇಕು ಎನ್ನುವಷ್ಟರಲ್ಲಿ ಜೋರಾಗಿ ಮಳೆ, ಗಾಳಿ ಆರಂಭವಾಗಿದೆ. ಈ ವೇಳೆ ಸಂತೋಷ್ ಹಾಗೂ ಮೂವರು ಸಹೋದರಿಯರು ಕಾರನ್ನು ಹತ್ತಿದ್ದರು. ಇನ್ನೇನು ಸುನೀತಾ ಅವರು ಕಾರನ್ನು ಹತ್ತಬೇಕು ಎನ್ನುವಷ್ಟರಲ್ಲಿ ಗಾಳಿಗೆ ಕಾರಿನ ಮೇಲೆ ಮರ ಉರುಳಿ ಬಿದ್ದಿದ್ದು, ಸುನೀತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಸಂತೋಷ್ ಹಾಗೂ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುನೀತಾ ಅವರ ಪತಿ ವಿದೇಶದಲ್ಲಿದ್ದು, ಇವರು ಮಗಳೊಂದಿಗೆ ಕೊಪ್ಪದಲ್ಲಿ ವಾಸವಾಗಿದ್ದರು.