ಹುಣಸೂರು ನಗರದ ಮಹಾವೀರ್ ಬಿಎಡ್ ಕಾಲೇಜಿನಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಚಂದ್ರಶೇಖರ್, ಆಡಳಿತಾಧಿಕಾರಿ ಅನಂತರಾಮು, ಸಂಪತ್‌ಕುಮಾರ್ ಇತರರು ಇದ್ದರು. 
ಜಿಲ್ಲೆ

ಈಡೇರಿದ ಸಂವಿಧಾನ ನಿರ್ಮಾತೃಗಳ ಆಶಯ

ಲೋಕೇಶ್ ಮನು. ಡಿ

ಹುಣಸೂರು: ಭಾರತ ಸಂವಿಧಾನ ಅಸ್ತಿತ್ವಕ್ಕೆ ಬಂದು ಏಳು ದಶಕಗಳು ಉರುಳಿದ್ದರೂ ಸಂವಿಧಾನ ನಿರ್ಮಾತೃಗಳ ಆಶಯ ಸಂಪೂರ್ಣವಾಗಿ ಈಡೇರಿಲ್ಲ ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.


ನಗರದ ಛಾಯಾದೇವಿ ಶಿಕ್ಷಣ ಸಂಸ್ಥೆಯ ಮಹಾವೀರ ಬಿ.ಎಡ್.ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ಗಣರಾಜ್ಯದ ಸ್ಥಾನಮಾನವನ್ನು ಪಡೆದು ಎಪ್ಪತ್ತೈದು ವರ್ಷಗಳು ಸಂದಿದ್ದರೂ ಸಂವಿಧಾನದ ಪ್ರಕಾರ ಆಡಳಿತ ನಡೆಸಲು ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಅಡೆತಡೆ ಒಡ್ಡುತ್ತಾ ದೇಶದ ಪರಮಾಧಿಕಾರಕ್ಕೆ ಸವಾಲಾಗಿರುವುದು ದುರಂತ ಸಂಗತಿ. ಭಾಷೆ, ಜಾತಿ, ಧರ್ಮ ಮತ್ತು ಜನಾಂಗದ ಆಧಾರದ ಮೇಲೆ ಅಸಮಾನತೆಯು ತಾಂಡವಾಡುತ್ತಿದ್ದು, ಸುಶಿಕ್ಷಿತರೇ ಇದರ ಹಿಂದಿನ ಸೂತ್ರಧಾರರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದರು.


ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ ಮೂಲಭೂತ ಹಕ್ಕುಗಳು ಸ್ವೇಚ್ಛಾಚಾರಕ್ಕೆ ಅವಕಾಶ ನೀಡುವ ಅಪಾಯವಿರುವುದರಿಂದ ಅವುಗಳನ್ನು ಸಂಯಮದಿಂದ ಬಳಸಬೇಕಾಗಿದೆ. ನಿಜವಾದ ಅರ್ಥದಲ್ಲಿ ಸಂವಿಧಾನದ ಆಶಯಗಳು ಈಡೇರಬೇಕಾದರೆ ದೇಶವು ಇನ್ನ್ನು ಕೆಲವು ಕಾಲ ಕಾಯಬೇಕಾಗುತ್ತದೆ. ಮುರಿದ ಮನಸ್ಸುಗಳ ನಡುವೆ ಗೋಡೆಕಟ್ಟದೆ ಸೇತುವೆ ಕಟ್ಟಿ ಭವಿಷ್ಯದ ಭಾರತವನ್ನು ಶಕ್ತಿಶಾಲಿಯಾಗಿ ಮಾಡಬೇಕಾಗಿರುವ ಗುರುತರವಾದ ಹೊಣೆಗಾರಿಕೆ ಯುವ ಸಮೂಹ ಮತ್ತು ವಿದ್ಯಾರ್ಥಿಗಳ ಮೇಲಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಅನಂತರಾಮು, ಸಹ ಪ್ರಾಧ್ಯಾಪಕರಾದ ಸಂಪತ್ ಕುಮಾರ್, ಮದನ್ ಕುಮಾರ್, ಯಶೋದ ಕುಮಾರ್, ಎಚ್.ಎಸ್.ಚಂದ್ರು, ಕೆ.ಕೀರ್ತಿಕುಮಾರ್, ಶ್ರುತಿ, ಜ್ಯೋತಿ, ವೇಣುಗೋಪಾಲ್, ಪಲ್ಲವಿ ಮುಂತಾದವರು ಇದ್ದರು.