ಜಿಲ್ಲೆ

ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಹೊಂದಿರುವ ವೆಲ್‌ನೆಸ್ ಕೇಂದ್ರ

ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿಯ ಕೇಂದ್ರ ಉಸ್ತುವಾರಿ ಆಚಾರ್ಯ ಡಾ. ಸದ್ವಿ ದೇವಪ್ರಿಯಾ ಅವರು ನಗರದಲ್ಲಿರುವ ಕರ್ನಾಟಕದ ಮೊಟ್ಟ ಮೊದಲ ಪತಂಜಲಿ ವೇಲನೆಸ್ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿದರು.
ನಂತರ ಮಾತನಾಡಿದ ಅವರು, ಕೇಂದ್ರದ ಸಮಗ್ರ ಯೋಗಕ್ಷೇಮ, ಚಿಕಿತ್ಸಾ ವಿಧಾನ, ಅತ್ಯಾಧುನಿಕ ಸೌಲಭ್ಯ, ಪ್ರಶಾಂತ ವಾತಾವರಣ, ಸಂಪ್ರದಾಯ ಮತ್ತು ಆಧುನಿಕ ವಿಧಾನವಾದ ಯೋಗ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ಅಭ್ಯಾಸಗಳೊಂದಿಗೆ ದೈವತ್ವದ ಸಂಪೂರ್ಣ ಮಿಶ್ರಣವನ್ನು ಈ ಸಂಸ್ಥೆ ಹೊಂದಿದೆ. ಇದರಿಂದ ಈ ಭಾಗದ ಜನರ ಆರೋಗ್ಯ ಕಾಪಾಡಲು ಅನುಕೂಲವಾಗಲಿದೆ ಎಂದರು. ವಿಶ್ವಚೇತನ ಯೋಗ ಸಂಶೋಧನಾ ಕೇಂದ್ರದ ಪದಾಧಿಕಾರಿಗಳು ಮಾತಾಜಿ ಜತೆಗೆ ಇದ್ದರು.
ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ, ನೀಲಕಂಠೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಅಥರ್ಗಾ ಗುರುದೇವಾಶ್ರಮದ ಶ್ರೀ ಈಶಪ್ರಸಾದ ಸ್ವಾಮೀಜಿ, ಪತಂಜಲಿ ಯೋಗಪೀಠ ಕರ್ನಾಟಕ ರಾಜ್ಯ ಪ್ರಭಾರಿ ಯೋಗಗುರು ಆಚಾರ್ಯ ಭವರಲಾಲ್ ಆರ್ಯ, ವಿಶ್ವಚೇತನ ಸಂಸ್ಥೆಯ ಅಧ್ಯಕ್ಷ ರಮೇಶ ಬಾಫಣಾ, ಟ್ರಸ್ಟಿ ಕಾರ್ಯದರ್ಶಿ ಮುಖೇಶ ಬಾಫಣಾ, ಟ್ರಸ್ಟಿ ದಿನೇಶ ಜೈನ್ ಇತರರು ಉಪಸ್ಥಿತಿಯಲ್ಲಿದ್ದರು.