ಜಿಲ್ಲೆ

ಸೂಕ್ತ ನಿರ್ಧಾರಕ್ಕೆ ವಾರ ಕಾಲಾವಕಾಶ

ಲೋಕೇಶ್ ಮನು. ಡಿ

 ಮಡಿಕೇರಿ: ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಾಲಯದಲ್ಲಿ ವಸ್ತ್ರಸಂಹಿತೆ ವಿಚಾರವಾಗಿ ಸೋಮವಾರ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ದೇವಾಲಯದ ಮರುಪರಿಶೀಲಿಸಿ ಎಲ್ಲರಿಗೂ ಒಪ್ಪಿಗೆಯಾಗುವಂಥ ಬೈಲಾ ರೂಪಿಸಲು ಒಂದು ವಾರದ ಗಡುವು ಕೇಳಿ ದೇವಾಲಯದ ಆಡಳಿತ ಮಂಡಳಿಯ ಪ್ರಮುಖರು ಮನವಿ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಶಾಂತಿಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಡಗು ಶಾಂತಿಪ್ರಿಯ ಜಿಲ್ಲೆ. ಆದ್ದರಿಂದ ಶಾಂತಿ ಕಾಪಾಡುವ ಸಲುವಾಗಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಕೊಡವ ಸಮುದಾಯದ ಮುಖಂಡರು, ಗೌಡ ಸಮುದಾಯದ ಮುಖಂಡರು ಹಾಗೂ ದೇವಾಲಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ಜತೆಗೆ ದೇವಾಲಯದ ಆಡಳಿತ ಮಂಡಳಿಯವರು ಒಂದು ಸಭೆ ನಡೆಸಲು ಮುಂದಿನ ಸೋಮವಾರ(ಒಂದು ವಾರದ)ದವರೆಗೆ ಸಮಯಾವಕಾಶ ಕೇಳಿದ್ದಾರೆ. ಇದಕ್ಕೆ ಎಲ್ಲ ಸಮುದಾಯದ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ.

ಮುಂದಿನ ಸೋಮವಾರದ ಒಳಗೆ ದೇವಾಲಯದ ಆಡಳಿತ ಮಂಡಳಿಯವರು ಸಭೆ ನಡೆಸಿ ಬೈಲಾವನ್ನು ಎಲ್ಲರಿಗೂ ಒಪ್ಪುವಂತೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜ.2 ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಅವಶ್ಯಕತೆ ಇದ್ದರೆ ಮುಂದಿನ ಸೋಮವಾರದವರೆಗೆ ಮುಂದೂಡಲಾಗುವುದು. ದೇವಾಲಯದಲ್ಲಿ ಎಂದಿನಂತೆ ಪೂಜೆ ನಡೆಯಲಿದೆ. ಆದರೆ, ಸಾರ್ವಜನಿಕರಿಗೆ ಯಾವುದೇ ಪ್ರವೇಶವಿಲ್ಲ ಎಂದ ಅವರು, ಬೈಲಾ ಸಂಬಂಧಿತ ಜಿಲ್ಲಾಡಳಿತ ಕೂಡ ಮಧ್ಯಪ್ರವೇಶಿಸಬಹುದು. ಆದರೆ ಊರಿನ ದೇವಾಲಯ ಅಲ್ಲಿನ ಆಡಳಿತ ಮಂಡಳಿಯವರು ತೀರ್ಮಾನ ತೆಗೆದುಕೊಳ್ಳಬೇಕಷ್ಟೇ ಎಂದು ತಿಳಿಸಿದರು.

ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಘಟನೆಯನ್ನು ಸರಿಪಡಿಸಲು ಸಮುದಾಯ ಬಾಂಧವರು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಪ್ರತಿಭಟನೆ ಕೈಬಿಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಜ.2ರವರೆಗೆ ಕಟ್ಟೆಮಾಡು ದೇವಾಲಯ ವ್ಯಾಪ್ತಿಯಲ್ಲಿ ಸೆ.163 ಮುಂದುವರಿಯಲಿದೆ. ಅಗತ್ಯ ಬಿದ್ದಲ್ಲಿ ಮತ್ತಷ್ಟು ದಿನಗಳ ಕಾಲ ಸೆಕ್ಷನ್ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಯಾವುದೇ ಸಮುದಾಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಕಂಡುಬಂದಲ್ಲಿ ಉಭಯ ಸಮುದಾಯದವರಿಗೂ ದೂರು ದಾಖಲಿಸಲು ಕಾನೂನು ಪ್ರಕಾರ ಅವಕಾಶವಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಪವಿಭಾಗಾಧಿಕಾರಿ ವಿನಾಯಕ್ ನಾರ್ವಡೆ, ಹೆಚ್ಚುವರಿ ಪೊಲಿಸ್ ಅಧೀಕ್ಷಕರಾದ ಕೆ.ಎಸ್.ಸುಂದರ್ ರಾಜ್, ಪ್ರೊಫೆಷನರಿ ಎಸ್‌ಪಿ ಡಾ.ಬೆನಕ ಪ್ರಸಾದ್ ಇದ್ದರು.