ಮಂಗಳೂರು: ಖತರ್ನಾಕ್ ಯುವಕನೊಬ್ಬ ನಾನು ಸಿವಿಲ್ ಇಂಜಿನಿಯರ್ ಎಂದು ವಧು ಹುಡುಕಲು ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಪ್ರೊಪೈಲ್ ಹಾಕಿಕೊಂಡಿದ್ದ. ಹಲವರು ಯುವತಿಯರಿಗೆ ಮದುವೆ ಪ್ರಸ್ತಾಪ ಕಳಿಸಿ ಅವರ ವಿಶ್ವಾಸ ಗಿಟ್ಟಿಸಿಕೊಂಡು ಆಮೇಲೆ ಮಾಡಬಾರದ್ದು ಮಾಡಿ ಬೆಂಗಳೂರಿನ ಹೆಣ್ಣೂರು ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ವಿಜಯಪುರ ಮೂಲದ ಜಗನ್ನಾಥ್(34) ಆರೋಪಿ. ಈತ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಮಹಿಳೆಯರನ್ನ ಮದುವೆಯಾಗುವುದಾಗಿ ನಂಬಿಸಿ ಪರಿಚಯಿಸಿಕೊಳ್ಳುತ್ತಿದ್ದ. ಇದೇ ರೀತಿ ತಾನು ಉಳ್ಳಾಲದ ನಿವಾಸಿಯೆಂದು ಹೇಳಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸುರತ್ಕಲ್ನ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿದ್ದ.
ನಾನು ಮನೆ ಖರೀದಿಸುತ್ತಿರುವೆ. ಸ್ವಲ್ಪ ಹಣದ ಕೊರತೆ ಇದೆ ಎಂದೇಳಿ, ಆ ಯುವತಿ ಬಳಿ 3 ಲಕ್ಷ ರೂ. ಸಾಲ ಕೇಳಿದ್ದ. ಹೇಗೂ ಮದುವೆ ಆಗುವ ಹುಡುಗ ಅಲ್ಲವೇ ಎಂದು ಆಕೆ ತನ್ನ ಚಿನ್ನವನ್ನು ಫೈನಾನ್ಸ್ನಲ್ಲಿ ಅಡವಿಟ್ಟು ಹಣ ನೀಡಿದ್ದಳು. ಇದರಲ್ಲಿ ಒಂದೂವರೆ ಲಕ್ಷ ರೂ. ಮರಳಿಸಿದ್ದ. ಸ್ವಲ್ಪ ದಿನಗಳ ನಂತರ ನಂಬಿಸಿ ಆ ಹಣವನ್ನೂ ಆಕೆಯಿಂದ ವಾಪಸ್ ಪಡೆದಿದ್ದ. ಬಳಿಕ ಜಗನ್ನಾಥ್ ನಾಪತ್ತೆಯಾಗಿದ್ದ. ಭಯಗೊಂಡ ಯುವತಿ ಹೆಣ್ಣೂರು ಠಾಣೆಗೆ ದೂರು ನೀಡಿದ್ದಳು. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ, ಈತ ಇದೇ ರೀತಿ ಹಲವು ಮಹಿಳೆಯರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಎಂಬುದು ಬಯಲಾಗಿದೆ.