ವಿರಾಜಪೇಟೆ: ಇಲ್ಲಿನ ಶಂಸುಲ್ ಉಲಮಾ ಎಜುಕೇಷನಲ್ ಅಕಾಡೆಮಿ ಟ್ರಸ್ಟ್‌ನ ಅನಾಥಾಶ್ರಮದಲ್ಲಿ ನಾಲ್ಕು ಹೆಣ್ಣು ಮಕ್ಕಳ ಮದುವೆ ಸಮಾರಂಭ ಶುಕ್ರವಾರ ವಿರಾಜಪೇಟೆ ಸಮೀಪದ ಪೆರುಂಬಾಡಿ ಶಂಸುಲ್ ಉಲಮ ಕ್ಯಾಂಪಸ್ ಆವರಣದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಶಿಕ್ಷಣದ ಮೂಲಕವೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದ್ದು, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುವ ಮೂಲಕ ಹಲವು ಯೋಜನೆಗಳನ್ನು ನೀಡಿದ್ದು ಇದರ ಸದ್ಬಳಕೆ ಮಾಡಿಕೊಂಡು ಉನ್ನತ ಮಟ್ಟದ ಶಿಕ್ಷಣದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಶುಲ್ ಉಲಮ ಎಜುಕೇಷನಲ್ ಅಕಾಡೆಮಿ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ನಿರ್ಗತಿಕ ಬಡ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವುದರ ಜುತೆಗೆ ಉದ್ಯೋಗ ಕಲ್ಪಿಸಿ ಮದುವೆ ಕಾರ್ಯವನ್ನೂ ನೆರವೇರಿಸುತ್ತಿರುವುದರಿಂದ ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆ ಎನಿಸಿದೆ ಎಂದರು.
ಅನಾಥಾಶ್ರಮದಲ್ಲಿ ನೂರಕ್ಕೂ ಹೆಚ್ಚು ಬಡ ಹೆಣ್ಣು ಮಕ್ಕಳನ್ನು ಉಚಿತ ವಸತಿ ಸೌಲಭ್ಯದೊಂದಿಗೆ ಉನ್ನತ ಶಿಕ್ಷಣ ಕಲಿಕೆಗೂ ಸಹಕಾರ ನೀಡಿ ಉತ್ತಮ ಭವಿಷ್ಯ ರೂಪಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದರು.
ಧಾರ್ಮಿಕ ಮುಖಂಡ ಪಾಣಕಾಡ್ ಬಶೀರ್ ಅಲಿ ಶಿಹಾಬ್ ತಂಗಳ್ ನಿಕಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹೆಸರಾಂತ ಪ್ರಭಾಶಕ ಸಿರಾಜುದ್ದೀನ್ ಅಲ್ ಕಾಸಿಮಿ ಧಾರ್ಮಿಕ ಪ್ರವಚನ ನೀಡಿದರು .
ಶಂಸುಲ್ ಉಲಮ ಎಜುಕೇಷನಲ್ ಟ್ರಸ್ಟ್ ಅಕಾಡೆಮಿ ಅಧ್ಯಕ್ಷ ಸಿ.ಪಿ.ಎಂ ಬಶೀರ್ ಹಾಜಿ ಮಾತನಾಡಿ, ಸಂಶುಲ್ ಉಲಮ ಟ್ರಸ್ಟ್ ಮೂಲಕ 40 ಬಡ ನಿರ್ಗತಿಕ ಹೆಣ್ಣು ಮಕ್ಕಳ ಮದುವೆ ಕಾರ್ಯ ಮಾಡಲಾಗಿದ್ದು . ಶಿಕ್ಷಣ, ಉದ್ಯೋಗ ಹಾಗೂ ಸುಖ ಜೀವನದೊಂದಿಗೆ ನೆಮ್ಮದಿಯಾಗಿ ಬದುಕು ಸಾಗಿಸುತ್ತಿದ್ದಾರೆ. ಅನಾಥಾಶ್ರಮದಲ್ಲಿ ನಿರ್ಗತಿಕ ಹೆಣ್ಣು ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಉನ್ನತ ಶಿಕ್ಷಣಕ್ಕೂ ಸಹಕಾರ ನೀಡಲಾಗುತ್ತಿದೆ. ದಾನಿಗಳು ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಸಹಕಾರ ನೀಡುತ್ತಿದ್ದಾರೆ ಎಂದರು.ನಾಲ್ಕು ಹೆಣ್ಣುಮಕ್ಕಳ ವಿವಾಹ ಕಾರ್ಯದಲ್ಲಿ ಧಾರ್ಮಿಕ ಪಂಡಿತರು, ಉಲಮಾ, ಉಮರಾಗಳು, ದಾನಿಗಳು, ಸಮಾಜ ಸೇವಕರು, ಜನಪ್ರತಿನಿಧಿಗಳು ಪಾಲ್ಗೊಂಡು ವಧು ವರರಿಗೆ ಶುಭ ಕೋರಿದರು.
ಸಮಸ್ತ ಕೇಂದ್ರ ಮುಸಾವರ ಸದಸ್ಯ ಹಾಗೂ ಕೊಡಗು ಉಪ ಖಾಝಿ ಎಂ.ಎಂ.ಅಬ್ದುಲ್ಲಾ ಪೈಜಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ದರ್ಮಜ ಉತ್ತಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾ ಅಧ್ಯಕ್ಷ ಅನಿಫ್, ಕೆಎಂಎ ಅಸೋಸಿಯನ್ ಅಧ್ಯಕ್ಷ ಸೂಫಿ ಹಾಜಿ, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಫಿ, ಬಸೀರ್, ಯಾಕುಬ್, ಅಬ್ದುಲ್ ಸಲಾಂ, ಪ್ರಮುಖರಾದ ಮುಸ್ತಫಾ ಹಾಜಿ, ಅಬ್ದುಲ್ ಗಪೂರ್, ಸಿದ್ದೀಕ್, ಉಮ್ಮರ್ ಪೈಝಿ, ಹಕೀಂ, ಮುಸ್ತಫ ಮಹಮ್ಮದ್ ಅಲಿ, ಹಂಸ ಹಾಜಿ, ಅಶ್ರಪ್, ಸಲೀಂ ಹಾಜಿ, ಬಸೀರ್ ಎಡಪಲ, ಎ.ಕೆ. ಹಕೀಂ, ಮಣಿ ಮಾಸ್ಟರ್ ಇತರರು ಇದ್ದರು.