ಜಿಲ್ಲೆ

ತವರಿಗೆ ಮರಳಿದ ಸೈನಿಕನಿಗೆ ಆತ್ಮೀಯ ಸ್ವಾಗತ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಕೆ.ಎಸ್.ಗುರುರಾಜ್

ಕೆ.ಎನ್.ರಾಘವೇಂದ್ರ

ಮಂಡ್ಯ: ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರಿಗೆ ವಾಪಸಾದ ಸೈನಿಕ ಕೆ.ಎಸ್.ಗುರುರಾಜ್ ಅವರಿಗೆ ಭೀಮ ಪಡೆ ಸಂಘಟನೆ ಮುಖಂಡರು ಹಾಗೂ ಹೊನಗಾನಹಳ್ಳಿ ಮಠದ ಗ್ರಾಮಸ್ಥರು ನಗರದ ರೈಲ್ವೆ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಕೆ.ಎಸ್.ಗುರುರಾಜ್, ಯುವಕರು ಸೇನೆಗೆ ಸೇರಬೇಕೆಂಬುದು ನನ್ನ ಆಸೆಯಾಗಿದೆ. ಅಲ್ಲಿ ಶಿಸ್ತನ್ನು ಕಲಿಸುತ್ತದೆ. ಕರ್ನಾಟಕದವರು ಹೆಚ್ಚಾಗಿ ಭಾರತೀಯ ಸೇನೆಗೆ ನೇಮಕವಾಗಲಿ, ಆ ಮೂಲಕ ಭಾರತ ದೇಶದ ಸೇವೆ ಮಾಡಲು ಒಂದು ದೊಡ್ಡ ಅವಕಾಶ ಸಿಕ್ಕಂತಾಗುತ್ತದೆ. ಜಮ್ಮು ಕಾಶ್ಮೀರ, ರಾಜಸ್ತಾನ್, ಅಸ್ಸಾಂ, ಅರುಣಾಚಲ ಪ್ರದೇಶ, ಗುಜರಾತ್, ಪುಣೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದೇನೆ. ದೇಶ ಸೇವೆಗಾಗಿ ಸದಾ ಸಿದ್ಧನಿರುತ್ತೇನೆ. ಎಂತಹ ಸಂದರ್ಭದಲ್ಲಿಯೂ ಸೇನೆ ಮತ್ತೆ ಕರೆಸಿಕೊಂಡರೆ ಹೋಗಲು ಸಿದ್ಧನಿರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭೀಮ ಪಡೆಯ ರಾಜ್ಯಾಧ್ಯಕ್ಷ ಎಚ್.ಎ.ಆತ್ಮಾನಂದ ಮಾತನಾಡಿ, ಸೈನಿಕ ಗುರುರಾಜ್ ಅವರು 24 ವರ್ಷ ಸೇವೆ ಸಲ್ಲಿಸಿ ಮತ್ತೆ ತವರಿಗೆ ಆಗಮಿಸಿದ್ದಾರೆ. ಇಂತಹ ಸೈನಿಕರನ್ನು ಗೌರವಯುತವಾಗಿ ಬರಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ಜೀವನ ಅವರ ಕುಟುಂಬದಲ್ಲಿ ಕಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಆಶಿಸಿದರು.

ಕೆ.ಎಸ್.ಗುರುರಾಜ್ ಪತ್ನಿ ಮಹಾಲಕ್ಷ್ಮೀ, ಭೀಮ ಪಡೆಯ ರಾಜ್ಯ ಕಾರ್ಯದರ್ಶಿ ನಿತ್ಯಾನಂದ, ಜಿಲ್ಲಾಧ್ಯಕ್ಷ ಎಸ್.ಪಿ.ನಾರಾಯಣಸ್ವಾಮಿ, ಕಾರ್ಯದರ್ಶಿ ಸುಧಾ ಹನುಮ, ಉಪಾಧ್ಯಕ್ಷ ಸುರೇಶ್, ಗ್ರಾಮಸ್ಥರಾದ ಮಹಾಲಿಂಗು, ಶ್ರೀನಿವಾಸ್, ಕುಮಾರ್ ಇತರರಿದ್ದರು.