ಮೈಸೂರು: ಯೋಗದ ಮಹತ್ವ ಸಾರುವ ಸಲುವಾಗಿ ಉದ್ಬೂರು ಗ್ರಾಮದ ಯೋಗ ಶಿಕ್ಷಕ ಕೃಷ್ಣ ನಾಯಕ ದೇಶದ ಉದ್ದಗಲಕ್ಕೂ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಭಾನುವಾರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದದಲ್ಲಿ ಪಾದಯಾತ್ರೆಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಚಾಲನೆ ನೀಡಿ, ಕೃಷ್ಣ ನಾಯಕ ಅವರಿಗೆ ಶುಭ ಕೋರಿದರು. ಯೋಗ ಶಿಕ್ಷಕ ರಾಘವೇಂದ್ರ ಪೈ, ಕೃಷ್ಣ, ದಯಾಕರ್, ಪ್ರಶಾಂತ್, ರಂಗಸ್ವಾಮಿ ಇತರರಿದ್ದರು.
ಭಾನುವಾರ ಆರಂಭಗೊಂಡ ಕೃಷ್ಣ ನಾಯಕ ಅವರ ಪಾದಯಾತ್ರೆಯ ದೇಶ ವ್ಯಾಪ್ತಿ ಸಂಚರಿಸಲಿದೆ. ಒಟ್ಟು 15,000 ಕಿ.ಮೀ. ಪಾದಯಾತ್ರೆ ನಡೆಸುವ ಗುರಿ ಹೊಂದಿದ್ದಾರೆ. ನಿತ್ಯ 30 ರಿಂದ 40 ಕಿ.ಮೀ. ಪಾದಯಾತ್ರೆ ಕೈಗೊಳ್ಳಲು ಅವರು ತೀರ್ಮಾನಿಸಿದ್ದಾರೆ. ಪಾದಯಾತ್ರೆಯ ಮಾರ್ಗದಲ್ಲಿ ಸಸಿಗಳು ಹಾಗೂ ಬೀಜಗಳನ್ನು ನೆಡುವ ಕಾರ್ಯವನ್ನು ಕೃಷ್ಣನಾಯಕ ನಡೆಸಲಿದ್ದಾರೆ. ಅಲ್ಲದೇ, ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಯೋಗದ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಮಾಡಲಿದ್ದಾರೆ.
ಮೈಸೂರಿನಿಂದ ಪ್ರಾರಂಭಗೊಂಡ ಪಾದಯಾತ್ರೆಯು ಮೊದಲ ದಿನ ಹುಣಸೂರು ವರೆಗೆ ನಡೆಯಲಿದೆ. ನಂತರ ಕುಶಾಲನಗರ ಮಡಿಕೇರಿ, ಸುಳ್ಯ, ಕಾಸರಗೋಡು, ತ್ರಿಶೂರ್, ತಲಚೇರಿ, ಕೋಜಿಕೋಡ್, ತಿರುವನಂತಪುರಂ, ಕನ್ಯಾಕುಮಾರಿ, ಮಧುರೈ, ತಂಜಾವೂರು, ಪುದುಚೇರಿ, ಚೆನ್ನೈ, ಹೈದರಾಬಾದ್, ವಿಶಾಖಪಟ್ಟಣ, ಭುವನೇಶ್ವರ್, ಕೋಲ್ಕತ್ತ, ತ್ರಿಪುರ, ಅಗರ್ತಲ, ಕೋಹಿಮಾ, ಇಟಾನಗರ, ಗುವಾಹಟಿ, ಗಯಾ, ವಾರಾಣಸಿ, ಪ್ರಯಾಗ್‌ರಾಜ್, ಲಕ್ನೊ, ಆಗ್ರಾ, ನವದೆಹಲಿ, ಹರಿದ್ವಾರ, ಶಿಮ್ಲಾ, ಜಮ್ಮು-ಕಾಶ್ಮೀರ, ಅಮೃತಸರ, ಚಂಡೀಗಡ, ಜೈಪುರ, ಭೂಪಾಲ್, ಇಂದೋರ್, ಗಾಂಧಿನಗರ, ಮುಂಬೈ, ಹೊಸಕೋಟೆ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಮಂಡ್ಯ ಮೂಲಕ ಸಾಗಿ ಮೈಸೂರಿನಲ್ಲಿ ಅಂತ್ಯಗೊಳ್ಳಲಿದೆ. ಒಟ್ಟು 15,000 ಕಿ.ಮೀ. ಪಾದಯಾತ್ರೆ ಕೈಗೊಳ್ಳಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.