ಜಿಲ್ಲೆ

ಸಮುದ್ರದ ಜೀವಶಾಸ್ತ್ರಗಳ ಅಧ್ಯಯನಕ್ಕಾಗಿ ಪಯಣ

ವೀರೇಶ ಸೌದ್ರಿ

ಕಾರವಾರ: ಸಮುದ್ರದ ಜೀವಶಾಸ್ತ್ರಗಳ ಅಧ್ಯಯನ, ಜಾಗೃತಿ ಮೂಡಿಸುವ ಸಲುವಾಗಿ ಮೈಸೂರಿನ ಸ್ಪೆಸಿಸ್ ಸಂಸ್ಥೆಯ ಸ್ಥಾಪಕ ಕಾರ್ತಿಕ್ ಕೇದಿಲಾಯ ಒಬ್ಬಂಟಿಯಾಗಿ ಕಯಾಕಿಂಗ್ ಮೂಲಕ ಪಯಣ ಆರಂಭಿಸಿದ್ದಾರೆ. 350 ಕಿ.ಮೀ. ದೂರ ಈ ಮೂಲಕ ತೆರಳಿ ಅಧ್ಯಯನ ನಡೆಸಲಿದ್ದಾರೆ.

ಇಲ್ಲಿಯ ಮುದಗಾದ ಕಡಲತೀರದಲ್ಲಿ ಶುಕ್ರವಾರ ಮಧ್ಯಾಹ್ನ ಆರಂಭಿಸಿದ ಅವರ ಪ್ರಯಾಣಕ್ಕೆ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಹರಗಿ ಚಾಲನೆ ನೀಡಿದರು.

ಈ ವೇಳೆ ತಮ್ಮ ಉದ್ದೇಶ ಹೇಳಿಕೊಂಡ ಕಾರ್ತೀಕ್, ಜಾಗತಿಕ ತಾಪಮಾನ, ಮಾಲಿನ್ಯ, ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಸಾಗರ ಜೀವಿಗಳು ನಶಿಸುವ ಹಂತಕ್ಕೆ ತಲುಪಿವೆ. ಪರಿಸರದ ಸಮತೋಲನಕ್ಕೆ ಅವು ಉಳಿಯುವುದು ಅಗತ್ಯ. ಹೀಗಾಗಿ, ವಿನೂತನವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕಡಲತೀರಕ್ಕೆ ಸಮೀಪದಲ್ಲೇ ಕಯಾಕಿಂಗ್ ಮೂಲಕ ಸಾಗುತ್ತೇನೆ. ನಿತ್ಯ 25 ಕಿ.ಮೀ. ಕ್ರಮಿಸುವ ಗುರಿ ಇಟ್ಟುಕೊಂಡಿದ್ದೇನೆ. ಏ. 21ರಂದು ಮಂಗಳೂರಿಗೆ ತಲುಪಲಾಗುವುದು ಎಂದರು.

ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕುಮಾರ ಕಲ್ಲೆ, ಸಿಎಂಎಫ್‌ಆರ್‌ಐ ವಿಜ್ಞಾನಿಗಳಾದ ಕಾಳಿದಾಸ, ಜಿ.ಬಿ. ಪುರುಷೋತ್ತಮ, ಸ್ಪೇಸಿಸ್ ಸಂಸ್ಥೆಯ ಅನನ್ಯಾ ವಾಸುದೇವ, ಡಿಆರ್‌ಎಫ್‌ಒ ರಾಜು ನಾಯ್ಕ, ಇತರರು ಇದ್ದರು.