ಜಿಲ್ಲೆ

ಬೆಂಗಳೂರಲ್ಲಿ ಸಾವಿರ ಕೋಟಿ ಒಡೆಯ ಕೆಜಿಎಫ್​ ಬಾಬುಗೆ ಸೋಲು! ಪರಿಷತ್​ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಬೆಂಗಳೂರು ನಗರ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಸಾವಿರ ಕೋಟಿ ಆಸ್ತಿ ಒಡೆಯ ಕೆಜಿಎಫ್ ಬಾಬು ಸೋಲುಂಡಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ. 397 ಮತಗಳ ಅಂತರದಿಂದ ಗೋಪಿನಾಥ್​ ರೆಡ್ಡಿ ಗೆಲುವು ಸಾಧಿಸಿದ್ದಾರೆ.

ಒಟ್ಟು 2070 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 13 ಮತ ಅಸಿಂಧು ಆಗಿವೆ. ಸಿಂಧುವಾದ ಮತಗಳ ಪೈಕಿ ಬಿಜೆಪಿಯ ಗೋಪಿನಾಥ ರೆಡ್ಡಿ 1227 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಯೂಸೂಫ್ ಷರೀಫ್​ 830 ಮತ ಪಡೆದಿದ್ದಾರೆ.

ಇದೇ ವೇಳೆ ಮಾತನಾಡಿದ ಗೋಪಿನಾಥ್​ ರೆಡ್ಡಿ, ನನಗೆ 1200ಕ್ಕೂ ಹೆಚ್ಚು ‌ಮತಗಳು ಬಂದಿವೆ. ಇದು ವೈಯಕ್ತಿಕ ಗೆಲುವಷ್ಟೇ ಅಲ್ಲ, ಪಕ್ಷದ ಗೆಲುವು ಆಗಿದೆ. ಬೈರತಿ ಬಸವರಾಜ್, ಸೋಮಶೇಖರ್, ಲಿಂಬಾವಳಿ ಸೇರಿದಂತೆ ಹಲವು‌ ಮುಖಂಡರ ಶ್ರಮವಿದೆ ಎಂದರು.

ನಾಮಪತ್ರ ಸಲ್ಲಿಕೆ ವೇಳೆ 1800 ಕೋಟಿ ಆಸ್ತಿ ಒಡೆಯ ಘೋಷಣೆ ಮಾಡಿಕೊಂಡು ಗಮನ ಸೆಳೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್​ ಬಾಬು ವಿರುದ್ಧ ಮತದಾನಕ್ಕೂ ವಿರುದ್ಧ ಕೌಟುಂಬಿಕ ಕಲಹ ಕುರಿತು ಒಂದಷ್ಟು ಆರೋಪಗಳು ಕೇಳಿಬಂದಿತ್ತು. ಆಗ ಇಬ್ಬರು ಪತ್ನಿಯರು-ಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದ ಬಾಬು, ರಾಜಕೀಯ ಅಂದ್ರೆ ಹೀಗೀರುತ್ತೆ ಅಂತಾ ಗೊತ್ತಿದ್ದರೆ ನಾನು ರಾಜಕೀಯಕ್ಕೇ ಬರುತ್ತಿರಲಿಲ್ಲ. ನಾನು ರಾಜಕೀಯಕ್ಕೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದರು. ನನ್ನ ಗಂಡನ ವಿರುದ್ಧ ಸಚಿವ ಸೋಮಶೇಖರ್ ಮಾಡಿರುವ ಆರೋಪದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎನ್ನುವ ಮೂಲಕ ಗಮನ ಸೆಳೆದಿದ್ದರು. ಒಟ್ಟಿನಲ್ಲಿ ಜಿದ್ದಾಜಿದ್ದಿನ ಕಣವಾಗಿದ್ದ ಬೆಂಗಳೂರು ನಗರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಪೈಪೋಟಿ ಕೊಟ್ಟಿದ್ದಂತೂ ಸುಳ್ಳಲ್ಲ.