ಜಿಲ್ಲೆ

ಮೇಲ್ಮನೆಗೆ ಬಿ.ವೈ.ವಿಜಯೇಂದ್ರ ಪ್ರವೇಶ ಸಾಧ್ಯತೆ: ರಾಜ್ಯ ಬಿಜೆಪಿ ಕೋರ್ ಕಮಿಟಿ ಶಿಫಾರಸು

arunakunigal

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲ್ಮನೆ ಪ್ರವೇಶಿಸುವ ಸಾಧ್ಯತೆಗಳಿವೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಬಲಾಬಲದ ಲೆಕ್ಕಾಚಾರದಂತೆ ನಾಲ್ಕು ಸ್ಥಾನಗಳಲ್ಲಿ ನಿರಾಯಾಸವಾಗಿ ಗೆಲ್ಲುತ್ತದೆ. ಲಭ್ಯವಾಗುವ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳ ಕುರಿತು ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಯಿತು.

ಜಾತಿ-ವರ್ಗವಾರು ಆದ್ಯತೆ ಪ್ರಕಾರ ನಾಲ್ಕು ಸ್ಥಾನಗಳಿಗೆ ತಲಾ ಐದರಂತೆ ಒಟ್ಟು 20 ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿಗೆ ಶಿಫಾರಸು ಮಾಡಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.

ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಹಾಲಿ ಸದಸ್ಯ ಲಕ್ಷ್ಮಣ ಸವದಿ, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನಾ, ತೇಜಸ್ವಿನಿ ಅನಂತಕುಮಾರ್, ರಾಜೇಂದ್ರ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ನಟಿ ಮಾಳವಿಕಾ, ಹಿರಿಯ ನಾಯಕಿ ಭಾರತಿ ಮಗ್ದುಂ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಹೆಸರು ಈ ಪಟ್ಟಿಯಲ್ಲಿವೆ ಎನ್ನಲಾಗುತ್ತಿದೆ.

ರಾಜ್ಯಸಭೆಗೂ ಶಿಫಾರಸು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಪಕ್ಷಕ್ಕೆ ಲಭ್ಯವಾಗುವ ಎರಡು ಸ್ಥಾನಗಳ ಜತೆಗೆ ಹೆಚ್ಚುವರಿಯಾಗಿ ಉಳಿಯುವ ಮತಗಳ ಜತೆಗೆ ಜೆಡಿಎಸ್ ನೆರವಿನಿಂದ ಮತ್ತೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಬಗ್ಗೆ ಚರ್ಚೆಯಾಗಿದೆ.

ಎರಡು ಸ್ಥಾನಗಳಿಗೆ ಹಾಲಿ ಸದಸ್ಯರಾದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಕೆ.ಸಿ.ರಾಮಮೂರ್ತಿ ಜತೆಗೆ ನಿರ್ಮಲ್‌ಕುಮಾರ್ ಸುರಾನಾ ಹೆಸರು ಶಿಫಾರಸಿಗೆ ತೀರ್ಮಾನಿಸಿದೆ.

ಮೂರನೇ ಸ್ಥಾನಕ್ಕೆ ಲೆಹರ್‌ಸಿಂಗ್ ಸಿರೋಯಿ, ಲಹರಿ ವೇಲು, ಪ್ರಕಾಶ್ ಶೆಟ್ಟಿ ಹೆಸರುಗಳು ಶಿಫಾರಸು ಮಾಡಿದ್ದು, ಜೆಡಿಎಸ್ ಬೆಂಬಲ ಗಳಿಸುವ ಜವಾಬ್ದಾರಿಯನ್ನು ಈ ಅಭ್ಯರ್ಥಿಗಳಿಗೆ ಒಪ್ಪಿಸಲು ಸಭೆ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.