ಜಿಲ್ಲೆ

ಅಭಿವೃದ್ಧಿಗೆ ಪೂರಕವಾದ ಗೆಲುವು

ಕೋಲಾರ ಡೆಸ್ಕ್

ಬೂದಿಕೋಟೆ: ಕ್ಷೇತ್ರದ ಹಾಲು ಉತ್ಪಾದಕರಿಗೆ ಹಾಗೂ ಹಾಲು ಡೇರಿಗಳನ್ನು ಅಭಿವೃದ್ಧಿಪಡಿಸಲು ಎಸ್​.ಎನ್​ ನಾರಾಯಣಸ್ವಾಮಿ ಅವರು ಕೋಮುಲ್​ ಚುನಾವಣೆ ಗೆಲುವು ಸಾಧಿಸಿರುವುದು ಮುಂಬರುವ ಚುನಾವಣೆಗಳಿಗೆ ಸಹಕಾರಿಯಾಗುವುದರ ಜತೆಗೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಮಾಜ ಸೇವಕ ಎ.ಬಾಬು ಹೇಳಿದರು.

ಕೋಲಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಶಾಸಕ ಎಸ್​.ಎನ್​ ನಾರಾಯಣಸ್ವಾಮಿ ಗೆಲುವು ಹಿನ್ನೆಲೆಯಲ್ಲಿ ಬೂದಿಕೋಟೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಮಾತನಾಡಿ, ಈ ಒಂದು ದಾಪುಗಾಲಿನಿಂದ ಕ್ಷೇತ್ರದ ಎಲ್ಲರಿಗೂ ಒಳಿತಾಗಲಿದೆ. ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೂ ಸಹಕಾರಿಯಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷ ಬಿ.ಆರ್​.ಮಂಜುನಾಥ್​ ಮಾತನಾಡಿ, ಈಗಾಗಲೇ ಶಾಸಕರು ಹೆಚ್ಚಿನ ಅನುದಾನ ತಂದು ಎಲ್ಲ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಿದ್ದಾರೆ ಎಂದರು.

ವಿಎಸ್ಸೆಸ್ಸೆನ್​ ಮಾಜಿ ಅಧ್ಯಕ್ಷ ಆರ್​.ವಿಜಯ್​ ಕುಮಾರ್​ ಮಾತನಾಡಿ, ಹಾಲು ಒಕ್ಕೂಟದ ಚುನಾವಣೆಗೆ ಶಾಸಕರು ಸ್ಪರ್ಧಿಸಬಾರದೆಂದು ವಿರೋಧ ಪಕ್ಷದವರು ಅನೇಕ ಕುತಂತ್ರ ನಡೆಸಿದರೂ ಶಾಸಕರು ಕುಗ್ಗದೆ ಕ್ಷೇತ್ರದ ಹಾಲು ಉತ್ಪಾದಕರ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಎಂದರು.