ರಾಣೆಬೆನ್ನೂರ: ತಾಲೂಕು ಆಡಳಿತವನ್ನು ಮುನ್ನಡೆಸುವ ತಹಸೀಲ್ದಾರರ ವಾಹನವೇ ಕಂಡ ಕಂಡಲ್ಲಿ ಕೆಟ್ಟು ನಿಲ್ಲುತ್ತಿದೆ. ಇದು ತಹಸೀಲ್ದಾರ್ ಶಂಕರ ಜಿ.ಎಸ್. ಅವರನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.
15 ವರ್ಷದ ಹಿಂದೆ ತಹಸೀಲ್ದಾರ್ ಓಡಾಟಕ್ಕೆಂದು ಟಾಟಾ ಸುಮೊ ವಾಹನ ನೀಡಲಾಗಿದೆ. ಅದೀಗ 5 ಲಕ್ಷಕ್ಕೂ ಅಧಿಕ ಕಿಮೀ ನಷ್ಟು ಕ್ರಮಿಸಿಯಾಗಿದೆ. ಇಂಜಿನ್ ಸಂಪೂರ್ಣ ಹದಗೆಟ್ಟು ಹೋಗಿದೆ. ಅಲ್ಲದೆ, ತಾಲೂಕಿನ ತುಂಗಭದ್ರಾ ನದಿಪಾತ್ರ ಕಲ್ಲಿನ ರಸ್ತೆ ಸೇರಿ ಅರಣ್ಯ ಪ್ರದೇಶದ ರಸ್ತೆಯಲ್ಲೂ ಹೆಚ್ಚಾಗಿ ವಾಹನ ಓಡಾಡಿದ್ದು, ಸಂಪೂರ್ಣ ಜಖಂ ಆಗಿದೆ. ಕಳೆದ ಐದು ತಿಂಗಳ ಹಿಂದಷ್ಟೇ ಬರೊಬ್ಬರಿ ತಿಂಗಳ ಕಾಲ ಗ್ಯಾರೇಜ್ನಲ್ಲಿದ್ದು, ಸಾವಿರಾರು ರೂ. ವ್ಯಯಿಸಿ ರಿಪೇರಿ ಮಾಡಿಸಿದರೂ ಮತ್ತೆ ಕೆಟ್ಟು ನಿಲ್ಲುತ್ತಿದೆ.
ತುಂಗಭದ್ರಾ ನದಿಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುವ, ಕಲ್ಲು ಅಕ್ರಮ ಗಣಿಗಾರಿಕೆ ಸಂದೇಶ ಬಂದಾಗ ಕೂಡಲೆ, ಸ್ಥಳಕ್ಕೆ ತೆರಳಬೇಕಾದ ಅನಿವಾರ್ಯತೆ ಇರುತ್ತದೆ. ಇಂಥ ತುರ್ತಾಗಿ ತೆರಳುವ ಸಂದರ್ಭದಲ್ಲಿ ವಾಹನ ಮಾರ್ಗಮಧ್ಯೆ ಕೆಟ್ಟು ನಿಂತ ಉದಾಹರಣೆಗಳು ಬಹಳಷ್ಟಿವೆ.
ಶಾಸಕರು, ಸಚಿವರು, ಹಿರಿಯ ಅಧಿಕಾರಿಗಳು ಬಂದಾಗ ಹಳೆಯ ವಾಹನದೊಂದಿಗೆ ನಿಗದಿತ ಸಮಯದಲ್ಲಿ ಸ್ಥಳಕ್ಕೆ ತಲುಪಲಾಗದೆ ತಹಸೀಲ್ದಾರ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ತಹಸೀಲ್ದಾರ್ ಕಚೇರಿಗೆ ಹೊಸ ವಾಹನ ಮಂಜೂರು ಮಾಡಿಸಬೇಕಿದೆ.
ಪ್ರಾಧಿಕಾರದ ವಾಹನಕ್ಕೆ ಗುದ್ದಿತ್ತು: ಎರಡು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದರು. ಆಗ ಸಚಿವರ ಬೆಂಗಾವಲು ವಾಹನದೊಂದಿಗೆ ಹೊರಟಿದ್ದ ತಹಸೀಲ್ದಾರ್ರ ವಾಹನ ಏಕಾಏಕಿ ಬ್ರೇಕ್ ಸಮಸ್ಯೆಯಿಂದಾಗಿ ಮುಂದೆ ಹೊರಟಿದ್ದ ನಗರ ಯೋಜನಾ ಪ್ರಾಧಿಕಾರದ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ ತಹಸೀಲ್ದಾರ್ರ ವಾಹನದ ಹೆಡ್ಲೈಟ್ ಜಖಂಗೊಂಡಿತ್ತು.
ಈಗಿರುವ ವಾಹನ 15 ವರ್ಷ ಹಳೆಯದಾಗಿದೆ. ಆಗಾಗ ರಿಪೇರಿಗೆ ಬರುತ್ತಿದೆ. ಯಾವುದಾದರೂ ತುರ್ತು ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ಕೈ ಕೊಡುವುದು ಹೆಚ್ಚಾಗಿದೆ. ಹೊಸ ವಾಹನಕ್ಕೆ ಪ್ರಸ್ತಾವನೆ ಸಲ್ಲಿಸಿ, ಬಹಳ ದಿನವಾಗಿದೆ. ಆದರೆ, ಈವರೆಗೂ ಸರ್ಕಾರದಿಂದ ಅನುಮೋದನೆ ದೊರೆತಿಲ್ಲ. | ಶಂಕರ ಜಿ.ಎಸ್., ತಹಸೀಲ್ದಾರ್ ರಾಣೆಬೆನ್ನೂರ