ನರಗುಂದ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ವಾಸನ ಗ್ರಾಮದಲ್ಲಿ ಭಾನುವಾರ ನಡೆದಿದೆ. ಚಾಲಕ ಮತ್ತು ಹಮಾಲರು ಪರಾರಿಯಾಗಿದ್ದಾರೆ.
ಗ್ರಾಮದ ಬಸ್ ನಿಲ್ದಾಣದ ಬಳಿ ಟಾಟಾ ಏಸ್ ವಾಹನದಲ್ಲಿ ತಲಾ 30 ಕೆಜಿ ತೂಕದ 40 ಚೀಲ ಅಕ್ಕಿಯನ್ನು ಪಕ್ಕದ ರಾಮದುರ್ಗ ತಾಲೂಕಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಇದನ್ನು ಅರಿತ ಗ್ರಾಮಸ್ಥರು ವಾಹನ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಣ್ಣೂರ ಹೊರಠಾಣೆ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ವಾಹನ ಚಾಲಕ ಮತ್ತು ಹಮಾಲರು ಅಲ್ಲಿಂದ ಪರಾರಿಯಾಗಿದ್ದಾರೆ.
ತಾಲೂಕು ಆಹಾರ ನಿರೀಕ್ಷಕ ಅನಿಲ ಪವಾರ ನೀಡಿರುವ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.