ಮಂಗಳೂರು: ವೇದಾಧ್ಯಯನ, ಅನುಷ್ಠಾನ ಪುರುಷರಿಗೆ ಸೀಮಿತವಲ್ಲ. ಪ್ರೋತ್ಸಾಹ, ಅನುಕೂಲ ವಾತಾವರಣ ಸಿಕ್ಕಿದರೆ ಮಹಿಳೆಯರೂ ವೇದಪಾರಂಗತರಾಗಬಹುದು. ಇದಕ್ಕೆ ಉತ್ತಮ ನಿದರ್ಶನ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕಶೆಕೋಡಿ ಎಂಬಲ್ಲಿನ 16ರ ಹರೆಯದ ಬಾಲಕಿ ಅನಘಾ!
ತಂದೆ ಕಶೆಕೋಡಿಯ ಸೂರ್ಯನಾರಾಯಣ ಭಟ್ ಪುರೋಹಿತರು. ಸಾಮಾಜಿಕ ಕೆಲಸಗಳಿಂದಲೂ ಗುರುತಿಸಿಕೊಂಡವರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಹೌದು. ಅನಘಾ ಎರಡು ವರ್ಷಗಳಿಂದ ಮನೆಯಲ್ಲೇ ವೇದಾಧ್ಯಯನ ಮಾಡುತ್ತಿದ್ದಾರೆ. ಋಗ್ವೇದದ ಸುಮಾರು 15 ಸೂಕ್ತಗಳು, ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ, ಯಜುರ್ವೇದದ ಶ್ರೀರುದ್ರ ಸಹಿತ ಹಲವಾರು ಶ್ಲೋಕಗಳನ್ನು ಕಲಿತಿದ್ದಾರೆ. ಇತ್ತೀಚೆಗೆ ತಂದೆಯ ಜತೆಗೆ ಪೂಜೆ, ಹೋಮ, ವಿವಾಹಾದಿಗಳಿಗೆ ಸಹಾಯಕಿಯಾಗಿ ತೆರಳಿದ್ದೂ ಇದೆ. ಇದರಿಂದ ಅವರಿಗೆ ಪ್ರಾಯೋಗಿಕ ತಿಳಿವಳಿಕೆ ಬಂದಿದೆ. ಸೂರ್ಯನಾರಾಯಣ ಭಟ್ ಕೆಲವೊಮ್ಮೆ ಮಗಳಿಂದಲೇ ವಿವಾಹ ವಿಧಿಯನ್ನು ನಡೆಸಿಕೊಟ್ಟಿದ್ದೂ ಇದೆ.
ಕಶೆಕೋಡಿ ಭಟ್ಟರ ‘ಕಲಾಶ್ರಯ’ ಮನೆಯಲ್ಲಿ ಪೌರೋಹಿತ್ಯ, ವೇದಾಭ್ಯಾಸದ ವಾತಾವರಣ ಇತ್ತು. ವೇದ, ಭಗವದ್ಗೀತೆ, ಸಂಗೀತಾದಿ ಕಲೆಗಳಿಗೆ ವಾರದ ಏಳೂ ದಿನವೂ ತರಬೇತಿ ಇದೆ. ಅಲ್ಲಿ ಹಲವು ವಿದ್ಯಾರ್ಥಿಗಳಿದ್ದಾರೆ. ಅದನ್ನು ನೋಡಿದ ಅನಘಾಗೆ ವೇದ ಕಲಿಯುವ ಇಚ್ಛೆ ಉಂಟಾಯಿತು. ಈ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿದ ಅನಘಾ, ಹುಡುಗಿಯರು ಯಾಕೆ ಮಂತ್ರ ಕಲಿಯಬಾರದು? ಎಂದು ಅಜ್ಜ ಹೇಳುತ್ತಿದ್ದರು. ನಮ್ಮದು ಪುರೋಹಿತ ಮನೆತನ. ಆದ್ದರಿಂದ ಚಿಕ್ಕಂದಿನಿಂದಲೇ ಇದೆಲ್ಲವನ್ನೂ ನೋಡುತ್ತ ಬೆಳೆದೆ. ಹಾಗಾಗಿ ವೇದ ಕಲಿಯುವ ಹುಮ್ಮಸ್ಸು ಬಂತು ಎನ್ನುತ್ತಾರೆ.
ಎರಡು ವರ್ಷದ ಅಧ್ಯಯನದಿಂದ ಪೂಜೆ, ಹೋಮಾದಿಗಳನ್ನು ಮಾಡುವ ಜ್ಞಾನ ಬಂದಿದೆ. ಮರಾಠಿ ನಾಯ್ಕರು, ಸಫಲಿಗರು, ಬಿಲ್ಲವ ಸಮುದಾಯದವರ ವಿವಾಹ ಮಾಡಿಸಿದ್ದೇನೆ. ನಾನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿನಿ, ಅಲ್ಲಿ ಮುಖ್ಯವಾಗಿ ಶಿಕ್ಷಕರು, ಆಡಳಿತ ಮಂಡಳಿಯವರು ವೇದಾಧ್ಯಯನಕ್ಕೆ ಸಹಕಾರ ನೀಡಿದ್ದಾರೆ ಎಂದು ಅನಘಾ ವಿವರಿಸಿದ್ದಾರೆ.
ವೇದವೆಂದರೆ ಜ್ಞಾನ: ವೇದಾಭ್ಯಾಸ ಪುರುಷರಿಗೆ ಸೀಮಿತವಲ್ಲ. ವೇದ ಎಂದರೆ ಜ್ಷಾನವೆಂದು ಅರ್ಥ. ಅದು ಎಲ್ಲರಿಗೂ ಇರಬೇಕಾದದ್ದು ಎನ್ನುತ್ತಾರೆ ಪುರೋಹಿತ ಸೂರ್ಯನಾರಾಯಣ ಭಟ್. ವೇದದ ಅಧ್ಯಯನದಿಂದ ಸಿಗುವ ಜ್ಞಾನದಿಂದ ಬದುಕು ಸಾಗಿಸಬೇಕು ಎನ್ನುತ್ತದೆ ವೇದ. ಸ್ತ್ರೀಯರಿಗೆ ವೇದಾಧ್ಯಯನ ಸಲ್ಲದು ಎಂದು ಎಲ್ಲಿಯೂ ಹೇಳಿಲ್ಲ. ಪುರುಷರಿಗೆ ಎಂದಿರುವುದು ನಿಜ, ಆದರೆ ಇಲ್ಲಿ ಪುರುಷ ಎಂದರೆ ಲಿಂಗವಲ್ಲ. ಪುರೀಷೇತೈತಿ ಪುರುಷಃ ಎಂದರೆ ಯಾವ ಜೀವದಲ್ಲಿ ಜೀವ ಇದೆಯೋ ಅದು ಪುರುಷ, ಇದರಲ್ಲಿ ಸ್ತ್ರೀಯರೂ ಸೇರಿದ್ದಾರೆ ಎಂದು ಅವರು ವಿವರಿಸುತ್ತಾರೆ.
ಸ್ತ್ರೀಯರು ಪೌರೋಹಿತ್ಯ ಮಾಡಿದರೆ ನಮಗೇನೂ ಸಮಸ್ಯೆ ಇಲ್ಲ. ವಿಧಿವಿಧಾನಗಳನ್ನು ಸರಿಯಾಗಿ ಮಾಡಬೇಕು ಎನ್ನುವವರ ಸಮಾರಂಭಗಳಿಗೆ ಮಾತ್ರ ಮಗಳನ್ನು ಕರೆದುಕೊಂಡು ಹೋಗಿದ್ದೇನೆ. ಅನೇಕ ಕಡೆ ಇದನ್ನು ಮೆಚ್ಚಿದ್ದಾರೆ. ಕೆಲವರು ಮುಂದಿನ ಬಾರಿ ಹೋಮಕ್ಕೆ ಅನಘಾಳೇ ಬರಬೇಕು ಎಂದು ಹೇಳಿದ್ದಿದೆ. ಆಕೆಗೆ ಇನ್ನಷ್ಟು ಕಲಿಯಲಿದೆ. ವೇದಾಧ್ಯಯನ ಸಾಗುತ್ತಿದೆ, ಪ್ರಯೋಗ ಪಾಠಗಳು ಆಗಬೇಕು. ಸಂಸ್ಕೃತ ಅಧ್ಯಯನ ಮುಂದುವರಿಸುವ ಆಕೆಯ ಆಸೆಗೆ ನಮ್ಮ ಬೆಂಬಲವಿದೆ.
|ಕಶೆಕೋಡಿ ಸೂರ್ಯನಾರಾಯಣ ಭಟ್ ಪುರೋಹಿತರು, ಬಂಟ್ವಾಳ