ಜಿಲ್ಲೆ

ವೈವಿಧ್ಯಮಯ ಕಾರ್ಯಕ್ರಮಗಳಿಗೆ ನ.೧೮ ರಂದು ಚಾಲನೆ

reportermys

ಮಡಿಕೇರಿ: ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನ೧೮ ರಿಂದ ೨೦ರ ವರೆಗೆ ಅಂತರ ಕೊಡವ ಸಮಾಜಗಳ ನಡುವಿನ ಕೊಡವ ನಮ್ಮೆ ಕಾರ್ಯಕ್ರಮ ನಡೆಯಲಿದೆ ಎಂದು ಸಮಾಜಗಳ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ತಿಳಿಸಿದರು.


ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ಈಗಾಗಲೇ ೩೪ ಕೊಡವ ಸಮಾಜಗಳು ಸದಸ್ಯತ್ವವನ್ನು ಪಡೆದಿದ್ದು, ಈ ಕೊಡವ ಸಮಾಜಗಳ ನಡುವೆ ಮೂರು ದಿನಗಳ ಕಾಲ ವಿವಿಧ ಸ್ಪರ್ಧೆಗಳು ನಡೆಯಲಿವೆ. ನ೧೮ ರಂದು ಬೆಳಗ್ಗೆ ಸ್ಥಳೀಯ ಆವರಣದಲ್ಲಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ೯ ಗಂಟೆಗೆ ಅಂತರ ಕೊಡವ ಸಮಾಜಗಳ ನಡುವೆ ನಾಕೌಟ್ ಮಾದರಿಯ ಹಾಕಿ ಪಂದ್ಯಾವಳಿ ನಡೆಯಲಿದ್ದು, ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.


ಹಿಂದೆ ನಡೆದಿದ್ದ ಹಾಕಿ ಪಂದ್ಯಾವಳಿಯಲ್ಲಿ ೧೧ ಕೊಡವ ಸಮಾಜಗಳು ಪಾಲ್ಗೊಂಡಿದ್ದು, ಈ ಬಾರಿ ಮತ್ತಷ್ಟು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂದು ಪೊಮ್ಮಕ್ಕಡ ಪರಿಷತ್‌ನಿಂದ ವಸ್ತುಪ್ರದರ್ಶನ ಕಾರ್ಯಕ್ರಮ ಕೂಡ ಜರುಗಲಿದೆ. ನ೧೯ ರಂದು ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿರುವ ಆಕರ್ಷಣೀಯವಾದ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಮಲ್ಚಿರ ಎ.ಅಯ್ಯಪ್ಪ, ಕೊಡಗಿನ ನಿವೃತ್ತ ಸೇನಾಧಿಕಾರಿಗಳು, ನಿವೃತ್ತ ಯೋಧರು ಹಾಗೂ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಹಾಕಿ ಪಂದ್ಯಾವಳಿ ಸೆಮಿಫೈನಲ್ ನಡೆಯಲಿದೆ.


ನ.೨೦ ರಂದು ಬೆಳಗ್ಗೆ ೯.೩೦ ಗಂಟೆಗೆ ಕೊಡವ ಸಮಾಜಗಳ ನಡುವೆ ರಾಜ್ಯಮಟ್ಟದ ಅಂತರ ಕೊಡವ ಸಮಾಜ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಉಮ್ಮತ್ತಾಟ್, ಕೋಲಾಟ್, ಬೊಳೋಪಾಟ್, ಕತ್ತಿಯಾಟ್, ಪರಿಯಕಳಿ, ಸಮ್ಮಂದ ಅಡುಕುವೊ, ತಾಲಿಪಾಟ್, ಕಪ್ಪೆಯಾಟ್ ಸೇರಿದಂತೆ ವಿವಿಧ ಜನಪದೀಯ ಕಲೆಗಳು ಆಕರ್ಷಿಸಲಿವೆ. ಮಧ್ಯಾಹ್ನ ಹಾಕಿ ಪಂದ್ಯಾವಳಿಯ ಫೈನಲ್, ಮಹಿಳೆಯರ ಹಗ್ಗಜಗ್ಗಾಟ ಹಾಗೂ ಭಾರದ ಗುಂಡು ಎಸೆತ ಸ್ಪರ್ಧೆಗಳು ನಡೆಯಲಿವೆ ಎಂದು ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾಹಿತಿ ನೀಡಿದರು.


ಹಾಕಿ ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ.೩೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.೨೦,೦೦೦ ನಗದು ಹಾಗೂ ಟ್ರೋಫಿ ಮತ್ತು ಸೆಮಿ ಫೈನಲ್‌ನಲ್ಲಿ ಭಾಗವಹಿಸಿ ಸೋತ ತಂಡಕ್ಕೆ ೧೦,೦೦೦ ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸುನಿಲ್ ಕುಮಾರ್, ಶಿಕ್ಷಣ ಸಚಿವರು ಹಾಗೂ ಕೊಡಗು ಉಸ್ತುವಾರಿ ಬಿ.ಸಿ.ನಾಗೇಶ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೆಂಗಡ ದಾದ ಬೆಳ್ಯಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.


ಎಲ್ಲಾ ಕೊಡವ ಸಮಾಜಗಳು, ಕೊಡವ ಸಂಘ, ಸಂಸ್ಥೆಗಳು, ಹಾಗೂ ಕೊಡವಾಭಿಮಾನಿಗಳು ೩ ದಿನಗಳ ಕಾಲ ನಡೆಯುವ ಕೊಡವ ನಮ್ಮೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ ಅವರು, ಸ್ಪರ್ಧೆಗಳು ಕೊಡವ ಸಮಾಜಗಳ ನಡುವೆ ನಡೆಯಲಿರುವುದರಿಂದ ಪ್ರತಿ ಕೊಡವ ಸಮಾಜದಿಂದ ಪ್ರತಿ ಸ್ಪರ್ಧೆಗೆ ಒಂದೊಂದು ತಂಡ ಮಾತ್ರ ಭಾಗವಹಿಸಬೇಕಾಗಿದೆ. ಭಾಗವಹಿಸಲಿರುವ ಕೊಡವ ಸಮಾಜಗಳು ತಮ್ಮ ತಂಡದ ವಿವರವನ್ನು ನ೧೦ ರೊಳಗೆ ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ೯೮೪೫೩೦೮೨೨೮, ೯೪೮೩೮೩೬೧೧೫ ಸಂಪರ್ಕಿಸಬಹುದಾಗಿದೆ. ಹಾಕಿ ತಂಡಗಳು ಕೊಡವ ಸಮಾಜಗಳ ಒಕ್ಕೂಟ ಬಾಳಗೋಡು ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.


ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಆಹಾರ ಸಮಿತಿ ಅಧ್ಯಕ್ಷ ಕುಂಬೇರ ಮನು ಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಹಂಚೆಟ್ಟೀರ ಮನು ಮುದ್ದಪ್ಪ ಹಾಗೂ ಕ್ರೀಡಾ ಸಮಿತಿಯ ಕಂಬೀರಂಡ ಕಿಟ್ಟು ಕಾಳಪ್ಪ ಉಪಸ್ಥಿತರಿದ್ದರು.