ಮೇಲುಕೋಟೆ: ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಗುರುವಾರ ಬ್ರಹ್ಮರಥೋತ್ಸವ ವೈಭವದಿಂದ ನೆರವೇರಿತು. ಸಹಸ್ರಾರು ಭಕ್ತರು ಭಾಗವಹಿಸಿ ರಥಕ್ಕೆ ಹಣ್ಣು-ದವನ ಎಸೆದು ದರ್ಶನ ಪಡೆದರು. ಶುಕ್ರವಾರ ಸಂಜೆ 7 ಗಂಟೆಗೆ ಚೆಲುವನಾರಾಯಣಸ್ವಾಮಿಗೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನೆರವೇರಲಿದೆ.
ತಿರುಪತಿ ತಿರುಮಲ ದೇವಸ್ಥಾನದ ಪೆರಿಯ ಜೀಯರ್ ಕೊಡುಗೆಯಾಗಿ ನೀಡಿದ ಬೃಹತ್ ರಥಕ್ಕೆ ಜಯ-ವಿಜಯ ಸಾರಥಿಯೊಂದಿಗೆ ತಳಿರು ತೋರಣ ಕಟ್ಟಿ ಪುಷ್ಪಾಲಂಕಾರ ಮಾಡಲಾಗಿತ್ತು. ರಥ ಚತುರ್ವೀದಿಗಳಲ್ಲಿ ಸಡಗರದೊಂದಿಗೆ ನೆರವೇರಿತು. ರಥೋತ್ಸವದ ನಂತರ ದೇವಾಲಯದಲ್ಲಿ ಚೆಲುವನಾರಾಯಣಸ್ವಾಮಿಗೆ ಅಭಿಷೇಕ ನೆರವೇರಿತು. ವಿದ್ವಾನ್ ಆನಂದ್ ಮತ್ತು ವಿದ್ವಾನ್ಕುಮಾರ್ ತಂಡದಿಂದ ಕನ್ನಡ ಮತ್ತು ಸಂಸತಿ ಇಲಾಖೆಯ ನಾದೋಪಾಸನ ಸೇವೆಯಲ್ಲಿ ಸ್ವಾಮಿಗೆ ಮಧುರವಾದ ನಾದಸ್ವರ ವಾದನದ ಕಲಾ ಸೇವೆ ನೆರವೇರಿತು.
ರಥೋತ್ಸವದಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್ ಇತರರು ಪಾಲ್ಗೊಂಡಿದ್ದರು. ಮೇಲುಕೋಟೆ ಠಾಣೆ ಇನ್ಸ್ಪೆಕ್ಟರ್ ಸುಮಾರಾಣಿ ಭದ್ರತೆ ಒದಗಿಸಿದ್ದರು.