A.V.KANAVI 
ಜಿಲ್ಲೆ

ಬಹದ್ದೂರ ಬಂಡಿ ಉತ್ಸವ ಅ.14 ಮತ್ತು 15ರಂದು

ಕೊಪ್ಪಳ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೋಟೆ ಗ್ರಾಮ ಬಹದ್ದೂರ ಬಂಡಿ ಉತ್ಸವವನ್ನು ಅ.14 ಮತ್ತು 15ರಂದು ಆಯೋಜಿಸಲಾಗಿದೆ ಎಂದು ಉತ್ಸವದ ಸರ್ವಾಧ್ಯಕ್ಷ, ವಕೀಲ ಎ.ವಿ.ಕಣವಿ ಹೇಳಿದರು.

ಇದೇ ಮೊದಲ ಬಾರಿಗೆ ಖಾಸಗಿಯಾಗಿ ವಿವಿಧ ಸಂಘಗಳ ಸಹಯೋಗದಲ್ಲಿ ಉತ್ಸವ ಹಮ್ಮಿಕೊಂಡಿದ್ದೇವೆ. ಬಹದ್ದೂರ ಬಂಡಿ ಕೋಟೆ 1076ರಲ್ಲಿ ಕಟ್ಟಲಾಗಿದೆ. ಹಲವರು ಆಡಳಿತ ನಡೆಸಿದ್ದಾರೆ.

ಶಾಸನ, ನಾಡಿನ ಇತಿಹಾಸ ಬಿಂಬಿಸುವ ಹಲವು ಕುರುಹುಗಳಿವೆ. ಆದರೆ, ಸರ್ಕಾರ ಕೋಟೆ ಅಭಿವೃದ್ಧಿ ಮರೆತಿದೆ. ಪ್ರಮುಖ ಪ್ರವಾಸಿ ತಾಣವಾಗಿ ಮಾಡುವ ಅವಕಾಶಗಳಿದ್ದರೂ ಕೈ ಕಟ್ಟಿ ಕುಳಿತಿದೆ. ಉತ್ಸವ ಆಚರಣೆ ಮೂಲಕ ನಾಡಿಗೆ ಕೋಟೆ ಇತಿಹಾಸ ತಿಳಿಸಲು ಮುಂದಾಗಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ದಿನ ಉದ್ಘಾಟನಾ ಕಾರ್ಯಕ್ರಮ, ಎರಡು ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ, ಅ.15ರಂದು ಮೂರು ಗೋಷ್ಠಿ, ಗಣ್ಯರಿಗೆ ಸನ್ಮಾನ, ಸಮಾರೋಪ ಸಮಾರಂಭ ಇರಲಿದೆ. ಸರ್ಕಾರವೇ ಉತ್ಸವ ಆಚರಣೆ ಮಾಡಬೇಕು.

ಆದರೆ ಮಾಡುತ್ತಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲ ಸೇರಿಕೊಂಡು ದೇಣಿಗೆ ಸಂಗ್ರಹಿಸಿ ಆಚರಿಸುತ್ತಿದ್ದೇವೆ. ಸಚಿವರು, ಶಾಸಕರು ಮುಂದೆ ಸರ್ಕಾರದಿಂದ ಆಚರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿ ಉತ್ಸವ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಯಳವಾರ, ಸದಸ್ಯ ದಾದಾಪೀರ ಮಂಡಲಗೇರಿ, ಮೆಹಬೂಬ್ ಕಿಲ್ಲೇದಾರ, ಸೈಯದ್ ಕಿಲ್ಲೇದಾರ, ಮೆಹಬೂಬ್ ಇದ್ದರು.