ಜಿಲ್ಲೆ

ಜಿಲ್ಲೆಯಲ್ಲಿ ವಿಶಿಷ್ಟ ವಿಶ್ವ ದಾಖಲೆ

ಆದರ್ಶ್. ಎಂ.ಕೆ.

ಮಡಿಕೇರಿ: ಯೋಧರ ನಾಡು ಎಂದು ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ವಿಶಿಷ್ಟ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ.


ಒಂದು ಕುಟುಂಬದ ಸದಸ್ಯರೆಲ್ಲಾ ಒಂದೇ ಕಾರ್ಯಕ್ರಮದ ವೇದಿಕೆಯಲ್ಲಿ ಸೇರುವ ಮೂಲಕ ವಿಭಿನ್ನ ದಾಖಲೆಯನ್ನು ಕೊಡವ ಜನಾಂಗ ತನ್ನದಾಗಿಸಿಕೊಂಡಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳ ೨೪ ರಂದು ಕೊಡವ ಜನಾಂಗದ ಸಾವಿರಾರು ಸದಸ್ಯರು ಸೇರಿದ ಕೊಡವ ಒಕ್ಕೂಟ ಸಮಾರಂಭಕ್ಕೆ ಇದೀಗ ಆಫೀಸಿಯಲ್ ವರ್ಲ್ಡ್ ರೆಕಾರ್ಡ್ಸನಲ್ಲಿ ಸ್ಥಾನ ದೊರಕಿದೆ. ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ಕೊಡವ ಕ್ಲಾನ್ ಸಂಸ್ಥೆ ಆಯೋಜಿಸಿದ್ದ ಒಕ್ಕೂಟ ಕಾರ್ಯಕ್ರಮದಲ್ಲಿ ಒಂದೇ ವಂಶವೃಕ್ಷಕ್ಕೆ ಸೇರಿದ ೨೮೮೯ ಕೊಡವರು ಭಾಗಿಯಾಗಿದ್ದರು.


ದಿನವಿಡಿ ನಡೆದ ಸಮಾರಂಭದಲ್ಲಿ ದೇಶ ವಿದೇಶದಿಂದ ಸಾವಿರಾರು ಕೊಡವರು ಒಟ್ಟಿಗೆ ಸೇರಿ ನೊಂದಣಿ ಮಾಡಿಕೊಂಡಿದ್ದರು. ಕೊಡವ ಕ್ಲಾನ್‌ನ ಸಂಸ್ಥಾಪಕ ಗುಮ್ಮಟ್ಟಿರ ಕಿಶು ಉತ್ತಪ್ಪ ಹಾಗೂ ಅವರ ತಾಯಿ ಗುಮ್ಮಟ್ಟಿರ ಸೀತಮ್ಮ(ತಾಮನೆ-ಮಂಡೇಪಂಡ) ಅವರ ಕಲ್ಪನೆಯಲ್ಲಿ ಆಯೋಜನೆಗೊಂಡಿದ್ದ ಒಕ್ಕೂಟದಲ್ಲಿ ಎರಡು ತಿಂಗಳ ಮಗುವಿನಿಂದ ೯೦ ವರ್ಷದ ಹಿರಿಯರು ಕೂಡ ಭಾಗಿಯಾಗಿದ್ದರು.


ಒಂದು ದಶಕದಿಂದ ಕೊಡವ ವಂಶವೃಕ್ಷದ ಬಗ್ಗೆ ಸಂಶೋಧನೆ ನಡೆಸಿದ ಕಿಶು ಉತ್ತಪ್ಪರವರ ಪ್ರಯತ್ನದಿಂದ ಕೊಡವ ಕುಲದವರೆಲ್ಲಾ ಒಂದೇ ವಂಶವೃಕ್ಷದಡಿಯಲ್ಲಿ ಸೇರುವವರು ಎಂದು ಸಾಬೀತಾಗಿ ದಾಖಲೆ ನಿರ್ಮಿಸುವ ಮೂಲಕ ಪುಟ್ಟ ಜಿಲ್ಲೆ ಕೊಡಗಿಗೆ ಮತ್ತೊಂದು ಕೀರ್ತಿ ತಂದಿದೆ.