ಸಕಲೇಶಪುರ: ಕಳೆದ ಎರಡು ದಶಕಗಳಿಂದ ಮೂಲಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಶುಕ್ರವಾರ ಪಟ್ಟಣದ 23ನೇ ವಾರ್ಡ್ ನಿವಾಸಿಗಳು ರಸ್ತೆಯ ಮಧ್ಯೆ ಭತ್ತದ ಸಸಿ ಹಾಗೂ ಕಂಬಗಳನ್ನು ನೆಟ್ಟು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯವಿಲ್ಲದೆ ಯಾತನೆ ಅನುಭವಿಸುತ್ತಿದ್ದೇವೆ. ಆದರೂ ಸಂಬಂಧಿಸಿದ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ನೀಡದಿರುವುದು ವಿಪರ್ಯಾಸವೇ ಸರಿ ಎಂದು ಕಿಡಿಕಾರಿದರು.
ರಸ್ತೆ ನಿರ್ಮಾಣದ ಸಂದರ್ಭ ಅಳವಡಿಸಲಾಗಿದ್ದ ಕಬ್ಬಿಣದ ರಾಡ್‌ಗಳು ಬಿರುಕು ಬಿಟ್ಟು ಹೊರಬಂದಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ದ್ವಿಚಕ್ರ ವಾಹನಗಳ ಸವಾರರು ಆಗಾಗ ಬಿದ್ದು ಕೈಕಾಲು ಮರಿದುಕೊಳ್ಳುವುದು ಇಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಅಲ್ಲದೆ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಕೊಳಚೆ ನೀರು ನಿಂತು ಗಬ್ಬು ನಾರುತ್ತಿದೆ. ಈ ಕುರಿತು ನಾವು ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ಭತ್ತದ ಸಸಿಗಳನ್ನು ನೆಟ್ಟು, ಕಂಬಿಗಳನ್ನು ನಿಲ್ಲಿಸಿ ಗಮನ ಸೆಳೆಯುವ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ನಿವಾಸಿಗಳು ತಿಳಿಸಿದರು.
ತಕ್ಷಣ ಸಂಬಂಧಪಟ್ಟವರು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೇಲೂರು ಸಕಲೇಶಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ಪುರಸಭೆ ಇಂಜಿನಿಯರ್ ಸುಜಾತಾ ಮತ್ತು ಸಿಬ್ಬಂದಿ ರೇವಣ್ಣ, ವರದರಾಜ್ ಅವರು ನಿವಾಸಿಗಳಿಂದ ಅಹವಾಲು ಸ್ವೀಕರಿಸಿ, ಇಲ್ಲಿನ ನೈಜ ಪರಿಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ವರದಿ ಮಾಡಲಾಗುವುದು. ತ್ವರಿತವಾಗಿ ರಸ್ತೆ, ಚರಂಡಿ ಮತ್ತು ಇತರ ಮೂಲಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು. ಬಳಿಕ ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ನಿವಾಸಿಗಳಾದ ಶಂಶು, ಮುತ್ತಲಿಬ್, ರವಿ, ವಾಜೀರ್, ಇಕ್ಬಾಲ್, ಕಲಂದರ್, ಡಿಸೋಜ, ರಜನಿ, ಪಾರ್ವತಿ ಇತರರು ಇದ್ದರು.