ಜಿಲ್ಲೆ

₹14 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, ಚಿನ್ನಾಭರಣ ವಶ

ಎನ್.ವೆಂಕಟೇಶ್

ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ ಬಾಗೇಪಲ್ಲಿ ಪೊಲೀಸರಿಂದ ಕಾರ್ಯಾಚರಣೆ

ಬಾಗೇಪಲ್ಲಿ: ದ್ವಿಚಕ್ರ ವಾಹನ ಹಾಗೂ ಒಂಟಿ ಮನೆ ಟಾರ್ಗೆಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶದ ನಾಲ್ವರು ಕಳ್ಳರನ್ನು ಬಂಧಿಸಿರುವ ಬಾಗೇಪಲ್ಲಿ ಪೊಲೀಸರು ಸುಮಾರು 10 ಲಕ್ಷ ರೂ. ಬೆಲೆಬಾಳುವ 20 ದ್ವಿಚಕ್ರ ವಾಹನಗಳು ಹಾಗೂ 4 ಲಕ್ಷ ರೂ. ಬೆಲೆಬಾಳುವ 58 ಗ್ರಾಂ ಚಿನ್ನದ ಒಡವೆ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಹಿಂದುಪುರ ತಾಲೂಕಿನ ಕೆ. ಮಣಿಕಂಠ, ವೆಂಕಟೇಶ್, ಸುರೇಶ್ ಹಾಗೂ ಪೆನುಗೊಂಡ ತಾಲೂಕಿನ ಸುಮಂತ್ ಬಂಧಿತರು.

ಕೆ.ಮಣಿಕಂಠ ಹಾಗೂ ಸುಮಂತ್ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಆರೋಪಿಗಳು ಬಾಗೇಪಲ್ಲಿ, ಯಲಹಂಕ ನ್ಯೂ ಟೌನ್, ಕೊಪ್ಪಳ ನಗರ, ಸಿಂಧನೂರು, ಕಾಮಾಕ್ಷಿಪಾಳ್ಯ, ಮಂಚೇನಹಳ್ಳಿ, ಮಾದನಾಯಕನಹಳ್ಳಿ, ಹಿರಿಯೂರು ನಗರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಾಗೇಪಲ್ಲಿ ತಾಲೂಕಿನ ಎಚ್.ವೆಂಕಟಚಾರಿ ನೀಡಿರುವ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಕಳ್ಳರನ್ನು ಬಂಧಿಸಿ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ವೆಂಕಟೇಶ್ ಬಾಬು ಮತ್ತು ಸುರೇಶ್ ಒಂಟಿ ಮನೆ ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದು, ಬಾಗೇಪಲ್ಲಿಯ ಬೈರೆಡ್ಡಿ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ ಚಿನ್ನಾಭರಣಗಳೊಂದಿಗೆ ಪರಾಗಿಯಾಗಿದ್ದರು. ಬೈರೆಡ್ಡಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಬಾಗೇಪಲ್ಲಿ ಪೊಲೀಸರು ಕಳ್ಳರನ್ನು ಪತ್ತೆಹಚ್ಚಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಎಸ್‌ಪಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಮುನಿರತ್ನಂ, ಪೇದೆಗಳಾದ ಧನಂಜಯ ಕುಮಾರ್, ಸುರೇಶ್, ಮೋಹನ್ ಕುಮಾರ್, ಸಾಗರ್, ಅನಿಲ್ ಕುಮಾರ್, ನಾಗೇಶ್, ಕೃಷ್ಣಪ್ಪ, ಜಯಣ್ಣ, ಶಂಕರಪ್ಪ, ರಾಜಪ್ಪ, ಜೀಪ್ ಚಾಲಕ ನೂರ್ ಬಾಷಾ, ರವಿಕುಮಾರ್, ಮುರಳಿಕೃಷ್ಣ ಇದ್ದರು.