ಬೆಂಗಳೂರು: ಕನ್ನಡ ಕಿರುತೆರೆ ಕಲಾವಿದ ಮಂಡ್ಯ ರವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಂಡ್ಯ ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷರೂ ಆದ ನಿವೃತ್ತ ಪ್ರಾಧ್ಯಾಪಕ ಎಚ್.ಎಸ್.ಮುದ್ದೇಗೌಡ ಅವರ ಪುತ್ರ ರವಿ. ಕೆಲ ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಂಡ್ಯ ರವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳು ಜಾನಕಿ, ಮಿಂಚು, ಮುಕ್ತಮುಕ್ತ, ಚಿತ್ರಲೇಖ, ಯಶೋಧೆ, ಓಂ ಶಕ್ತಿ ಓಂ ಶಾಂತಿ, ವರಲಕ್ಷ್ಮೀ ಸ್ಟೋರ್ಸ್ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ನಟಿಸಿದ್ದಾರೆ. ಕಾಫಿತೋಟ, ಘಜಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಪೂರ್ಣ ಹೆಸರು ರವಿ ಪ್ರಸಾದ್ ಎಂ. ಚಿತ್ರರಂಗದಲ್ಲಿ ಮಂಡ್ಯ ರವಿ ಎಂದೇ ಚಿರಪರಿಚಿತ.
ಮಂಡ್ಯ ರವಿ ಅವರು ಎಂಎ(ಇಂಗ್ಲಿಷ್), ಎಲ್ಎಲ್ಬಿ ಓದಿದರೂ ಬಣ್ಣದ ಲೋಕದತ್ತ ಆಕರ್ಷಿತರಾಗಿ ನಟನೆಯತ್ತ ಆಗಮಿಸಿದರು. 1996ರಲ್ಲಿ 'ಜನದನಿ' ಎಂಬ ಹವ್ಯಾಸಿ ನಾಟಕ ತಂಡ ಸೇರಿದರು. ಟಿ.ಎಸ್.ನಾಗಾಭರಣ ನಿರ್ದೇಶನದ 'ಮಾಹಾಮಾಯಿ' ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. 'ಮಗಳು ಜಾನಕಿ' ಧಾರಾವಾಹಿಯ ಚಂದು ಭಾರ್ಗಿ ಪಾತ್ರಧಾರಿಯಾಗಿ ಮಂಡ್ಯ ರವಿ ನಟಿಸಿ ವೀಕ್ಷಕರ ಮನಕ್ಕೆ ಮತ್ತಷ್ಟು ಹತ್ತಿರವಾಗಿದ್ದರು. ಇವರು ಶೀಘ್ರ ಗುಣಮುಖವಾಗಲೆಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.