ಜಿಲ್ಲೆ

4 ದಿನ ಸ್ನೇಹಿತನ ಶವ ಬಚ್ಚಿಟ್ಟು ನಾಟಕವಾಡಿದ್ದ! ​ಮಿಸ್ಸಿಂಗ್​ ಕೇಸ್​ ದಾಖಲಾಗ್ತಿದ್ದಂತೆ ನಡೆಯಬಾರದ್ದು ನಡೆದೇ ಹೋಯ್ತು

ತುರುವೇಕೆರೆ: ವಿದ್ಯುತ್​ ತಂತಿ ಸರಿಪಡಿಸಲು ತೆರಳಿದ್ದಾಗ ಸಂಭವಿಸಿದ್ದ ಅವಘಡದಲ್ಲಿ ಮೃತಪಟ್ಟಿದ್ದ ಸ್ನೇಹಿತನ ಶವ ಮುಚ್ಚಿಟ್ಟು ಕಾಣೆಯಾಗಿದ್ದಾನೆ ಎಂದು ನಾಟಕವಾಡಿದ್ದ ವ್ಯಕ್ತಿಯೀಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ತೊರೆಮಾವಿನಹಳ್ಳಿ ಯೋಗಾನಂದ(36) ಮೃತ. ಈತನ ಸ್ನೇಹಿತ ತೊರೆಮಾವಿನಹಳ್ಳಿಯ ರೋಹಿತ್​ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಸೇರಿದ್ದಾನೆ. ಕಳೆದ ವಾರ ರೋಹಿತ್ ತೋಟದಲ್ಲಿ ಬೋರ್​ವೆಲ್ ರೀಪೇರಿ ಮಾಡಲು ರೋಹಿತ್ ಜತೆ ಸ್ನೇಹಿತರವಾರ ಯೋಗಾನಂದ, ವಿನಯ್​ ಕೂಡ ತೆರಳಿದ್ದರು. ಬಳಿಕ ಯೋಗಾನಂದ ಮನೆಗೆ ವಾಪಸ್​ ಆಗಿರಲಿಲ್ಲ. ಯೋಗಾನಂದ ಫೆ.26ರಿಂದ ಕಾಣೆಯಾಗಿದ್ದಾನೆ ಎಂದು ಆತನ ಸಹೋದರ ಜಗದೀಶ್​ ದೂರು ನೀಡಿದ್ದರು.

ಅತ್ತ ಯೋಗಾನಂದನ ಪ್ರಕರಣ ಸಂಬಂಧ ಭಯಗೊಂಡ ರೋಹಿತ್​, ಮಾ.3ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಈ ಬಗ್ಗೆ ವಿಚಾರಣೆಗೆ ಹೋಗಿದ್ದ ಪೊಲೀಸರಿಗೆ ಯೋಗಾನಂದನ ಸಾವಿನ ರಹಸ್ಯವನ್ನು ರೋಹಿತ್​ ಬಾಯ್ಬಿಟ್ಟಿದ್ದು, ಪ್ರಕರಣ ಗ್ರಾಮಸ್ಥರನ್ನೇ ಬೆಚ್ಚಿ ಬೀಳಿಸಿದೆ.

ಯೋಗಾನಂದ, ರೋಹಿತ್​ ಹಾಗೂ ವಿನಯ್​ ಊರಿನಲ್ಲಿ ವಿದ್ಯುತ್​ ಪರಿವರ್ತಕದಲ್ಲಿ ಲೈನ್​ ಕಾಮನ್​ ಮಾಡಿಕೊಂಡು ಬರಲು ಹೋಗಿದ್ದು, ಈ ಸಂದರ್ಭದಲ್ಲಿ ಸಂಭವಿಸಿದ ವಿದ್ಯುತ್​ ಅವಘಡದಲ್ಲಿ ಯೋಗಾನಂದ್​ ಮೃತಪಟ್ಟಿದ್ದ. ಭಯಗೊಂಡ ವಿನಯ್​ ಮತ್ತು ರೋಹಿತ್​ ಇಬ್ಬರೂ ಶವವನ್ನ ಬೇರೆಡೆಗೆ ಬಿಸಾಡಿ ಮಿಸ್ಸಿಂಗ್ ಸೀನ್ ಕ್ರಿಯೆಟ್ ಮಾಡಿದ್ದರು. ಶವವನ್ನ 90 ಕಿಲೋ ಮೀಟರ್ ದೂರ ಬೈಕ್​ನಲ್ಲಿ ಕೊಂಡೊಯ್ದು ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿಯ ಸೇತುವೆಯೊಂದರ ಕೆಳಗೆ ಎಸೆದು ಬಂದಿದ್ದರು. ಬಳಿಕ ಪ್ರಕರಣದ ಸುಳಿವು ಸಿಗದಂತೆ ತಿಪಟೂರಿನ ಕೆಬಿ ಕ್ರಾಸ್ ಬಳಿ ಯೋಗಾನಂದನ ಬೈಕ್ ನಿಲ್ಲಿಸಿ ಆತ ಕಾಣೆಯಾಗಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿದ್ದರು.

ಯೋಗಾನಂದ ಕಾಣೆಯಾಗಿದ್ದಾರೆ ಎಂದು ಈತನ ಸಹೋದರ ದೂರು ದಾಖಲಿಸುತ್ತಿದ್ದಂತೆ ವಿಷ ಕುಡಿದು ಆತ್ಮಹತ್ಯೆಗೆ ರೋಹಿತ್​ ಯತ್ನಿಸಿದ್ದ. ಪೊಲೀಸ್​ ತನಿಖೆಯಲ್ಲಿ ರೋಹಿತ್​ ಎಲ್ಲವನ್ನೂ ಬಾಯ್ಬಿಟ್ಟಿದ್ದಾನೆ. ಶವ ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಶುಕ್ರವಾರ ಅಂತ್ಯಕ್ರಿಯೆ ನಡೆದಿದೆ. ವಿಷ ಸೇವಿಸಿರುವ ಆರೋಪಿ ರೋಹಿತ್​ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ.