ಜಿಲ್ಲೆ

ಅಕ್ಕಿರಾಂಪುರದಲ್ಲಿ ಪಡಿತರ ವಿತರಣೆ ವಿಚಾರಕ್ಕೆ ಪ್ರಕ್ಷುಬ್ಧ ವಾತಾವರಣ!

ಕೊರಟಗೆರೆ: ಪಡಿತರ ವಿತರಣೆಯಲ್ಲಿ ಲೋಪದಿಂದ ಉಂಟಾದ ಗಲಭೆಯಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನ ಅಕ್ಕಿರಾಂಪುರದಲ್ಲಿ ನಡೆದಿದೆ.

ಸೋಮವಾರ ಪಡಿತರ ಚೀಟಿದಾರರಿಗೆ ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರವನ್ನು ಈ ತಿಂಗಳೇ ವಿತರಿಸಬೇಕಿದ್ದು, ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತೀ ಸದಸ್ಯರಿಗೆ ತಲಾ 5 ಕೆಜಿಯಂತೆ 10 ಕೆಜಿ ಅಕ್ಕಿ ವಿತರಿಸಬೇಕಿತ್ತು. ಆದರೆ, ನ್ಯಾಯಬೆಲೆ ಅಂಗಡಿ ಮಾಲೀಕ 20 ಕೆಜಿ ಅಕ್ಕಿ ವಿತರಿಸಿದ್ದರಿಂದ 150 ಮಂದಿಗೆ ಪಡಿತರ ದೊರೆಯಲಿಲ್ಲ. ಇದನ್ನು ಗ್ರಾಮಸ್ಥರು ಪ್ರಶ್ನಿಸಿದಾಗ ಸಣ್ಣದಾಗಿ ಆರಂಭವಾದ ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗಿದೆ.

ಗಲಾಟೆ ಸುದ್ದಿತಿಳಿದು ಆಹಾರ ಇಲಾಖೆ ನಿರೀಕ್ಷಕರು ಗ್ರಾಮಕ್ಕೆ ತೆರಳಿ ಪಡಿತರ ಹಿಂಪಡೆದು ಹೊಸದಾಗಿ ವಿತರಿಸುವುದಾಗಿ ತಿಳಿಸಿದ್ದು ಗಲಭೆ ಬೇರೆ ರೂಪಪಡೆದುಕೊಂಡಿತು. ಏಕಾಏಕಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಗ್ರಾಮಕ್ಕೆ ದೌಡಾಯಿಸಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಕೊರಟಗೆರೆ ಠಾಣೆ ಪಿಎಸ್ಸೈ ಮುತ್ತುರಾಜ್ ಠಾಣೆಗೆ ಗ್ರಾಮಸ್ಥರನ್ನು ಕರೆಸಿ ಸಂಧಾನ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ಸದ್ಯಕ್ಕೆ ಗ್ರಾಮದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು ಸ್ಥಳದಲ್ಲೇ ಜಿಲ್ಲಾ ಸಶಸ್ತ್ರ ಪಡೆ ತುಕಡಿ ಬೀಡುಬಿಟ್ಟಿದೆ.

ಏಪ್ರಿಲ್ ತಿಂಗಳಿನಲ್ಲಿಯೇ ವಿತರಣೆ : ಕರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರವನ್ನು ಏಪ್ರಿಲ್ ತಿಂಗಳಿನಲ್ಲಿಯೇ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ತಿಳಿಸಿದ್ದಾರೆ. ಎಎವೈ(ಅಂತ್ಯೋದಯ) ಪಡಿತರ ಚೀಟಿದಾರರಿಗೆ ಪ್ರತೀ ಪಡಿತರ ಚೀಟಿಗೆ 35 ಕೆಜಿಯಂತೆ 2 ತಿಂಗಳಿಗೆ 70 ಕೆ.ಜಿ.ಅಕ್ಕಿ(ಗೋಧಿ ಹಂಚಿಕೆ ಇರುವುದಿಲ್ಲ)ಯನ್ನು ಉಚಿತವಾಗಿ ವಿತರಿಸಲಾಗುವುದು. ಪಿಎಚ್‌ಎಚ್ (ಬಿಪಿಎಲ್) ಕಾರ್ಡ್‌ದಾರರಿಗೆ ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತೀ ಸದಸ್ಯರಿಗೆ ತಲಾ 5 ಕೆಜಿಯಂತೆ 2 ತಿಂಗಳಿಗೆ 10 ಕೆಜಿ ಅಕ್ಕಿ ಹಾಗೂ ಪ್ರತೀ ಕಾರ್ಡಿಗೆ 2 ಕೆಜಿಯಂತೆ 2 ತಿಂಗಳಿಗೆ 4 ಕೆಜಿ ಗೋಧಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಎಪಿಎಲ್ ಪಡಿತರ ಚೀಟಿದಾರರಿಗೆ ಹಾಗೂ ಪಡಿತರ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವ ಏಕವ್ಯಕ್ತಿ ಪಡಿತರ ಚೀಟಿಗೆ 5 ಕೆಜಿಯಂತೆ 2 ತಿಂಗಳಿಗೆ 10 ಕೆಜಿ ಹಾಗೂ 2 ಮತ್ತು ಹೆಚ್ಚಿನ ಕುಟುಂಬದ ಸದಸ್ಯರಿರುವ ಪಡಿತರ ಚೀಟಿಗೆ 10 ಕೆಜಿಯಂತೆ 2 ತಿಂಗಳಿಗೆ 20 ಕೆಜಿ ಅಕ್ಕಿ (ಪ್ರತಿ ಕೆ.ಜಿ. ಅಕ್ಕಿಗೆ 15ರೂ.)ಯನ್ನು ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.