ಜಿಲ್ಲೆ

ಪಾವಗಡದಲ್ಲಿ ಭೀಕರ ಅಪಘಾತ: 5ಕ್ಕೇರಿದ ಸಾವಿನ ಸಂಖ್ಯೆ, ಮೃತರೆಲ್ಲರೂ ಶಾಲಾ-ಕಾಲೇಜು ವಿದ್ಯಾರ್ಥಿಗಳು

arunakunigal

ತುಮಕೂರು: ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರೆಲ್ಲರೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದೆ.

ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಖಾಸಗಿ ಬಸ್ ಶನಿವಾರ ಬೆಳಗ್ಗೆ 9 ಗಂಟೆಯಲ್ಲಿ ಅಪಘಾತಕ್ಕೀಡಾಗಿದೆ. ಈ ಬಸ್​ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಪ್ರಯಾಣಿಸುತ್ತಿದ್ದರು. ಪಳವಳ್ಳಿ ಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್​, ರಸ್ತೆ ಡಿವೈಡರ್ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಮತ್ತೊಬ್ಬರುಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. 20ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಮತ್ತಷ್ಟು ಸಾವು-ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಪಾಲಕರು ಮತ್ತು ಕುಟುಂಸ್ಥರ ಗೋಳಾಟ ಮುಗಿಲು ಮುಟ್ಟಿದೆ.

ಗಾಯಾಳುಗಳನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮೃತದೇಹಗಳು ರಸ್ತೆ, ರಸ್ತೆ ಬದಿ... ಹೀಗೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು. (ಇದಿಷ್ಟು ಪ್ರಾಥಮಿಕ ಮಾಹಿತಿ)