ಹುಣಸೂರು ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶಿಕ್ಷಕರನ್ನು ಅಭಿನಂದಿಸಲಾಯಿತು. ಸಿಸ್ಟರ್ ಬಿಂದು ಎಲಿಜೆಬೆತ್, ಲಕ್ಷ್ಮೀಕಾಂತ್, ಟಿ.ಲೋಕೇಶ್, ಟಿ.ಚಂದ್ರಶೇಖರ್ ಇತರರಿದ್ದಾರೆ. 
ಜಿಲ್ಲೆ

ಮಕ್ಕಳಲ್ಲಿ ಸ್ಫೂರ್ತಿ ತುಂಬುವವನೇ ನಿಜ ಶಿಕ್ಷಕ

ವಸಂತಕುಮಾರ್ ಬಿ

ಹುಣಸೂರು: ಆಧುನಿಕತೆ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಶಿಕ್ಷಕನ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ರಾವಂದೂರು ಸರ್ಕಾರಿ ಪಿಯು ಕಾಲೇಜಿನ ಆಂಗ್ಲ ಭಾಷೆ ಉಪನ್ಯಾಸಕ ಲಕ್ಷ್ಮೀಕಾಂತ್ ಅಭಿಪ್ರಾಯಪಟ್ಟರು.

ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 2025ನೇ ಸಾಲಿನ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆಗಳ ಕುರಿತು ಸ್ಫೂರ್ತಿ ತುಂಬುವವನೇ ನಿಜವಾದ ಶಿಕ್ಷಕ. ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಬಂಧ ಶಿಲ್ಪಿ ಮತ್ತು ಕಲ್ಲು ಇದ್ದಂತೆ, ಕುಂಬಾರ ಮತ್ತು ಮಡಕೆಯಿದ್ದಂತೆ. ಶಿಕ್ಷಕ ಪ್ರತಿದಿನ ವಿದ್ಯಾರ್ಥಿಯಾಗಿಯೇ ಶಾಲೆಗೆ ಬರಬೇಕು. ತನ್ನನ್ನು ತಾನು ಉನ್ನತೀಕರಿಸಿಕೊಳ್ಳುವತ್ತ ಗಮನಹರಿಸಬೇಕು. ತಂತ್ರಜ್ಞಾನಗಳು ಮುಂದುವರಿದಿದ್ದು, ಕೃತಕ ಬುದ್ಧಿಮತ್ತೆ ಮನುಷ್ಯನ್ನು ಮರುಳು ಮಾಡಬಹುದು. ಆದರೆ ಶಿಕ್ಷಕನಿಗೆ ಬದಲಾಗಿ ಮತ್ತೊಂದನ್ನು ತುಂಬಲು ಸಾಧ್ಯವಿಲ್ಲ ಎಂದು ಹೇಳಿದರು.

ನಾಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಟಿ.ಲೋಕೇಶ್ ಮಾತನಾಡಿ, ಶಿಕ್ಷಕನ ನಿಸ್ವಾರ್ಥ ಸೇವೆಯಿಂದ ಮಾತ್ರ ದೇಶ ಸದೃಢ ಸಮಾಜ ಹೊಂದಲು ಸಾಧ್ಯ. ನಮ್ಮ ದೇಶದಲ್ಲಿ ಗುರು ಪರಂಪರೆಗೆ ಪ್ರಾಮುಖ್ಯತೆ ನೀಡಿದೆ. ದೀಪ ನಾನುರಿದು ಬೆಳಕನ್ನು ನೀಡುವಂತೆ ಶಿಕ್ಷಕ ತನ್ನ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಸಾರ್ಥಕತೆ ಕಾಣಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕಿ ಸಿಸ್ಟರ್ ಬಿಂದು ಎಲಿಜಬೆತ್ ವಹಿಸಿದ್ದರು. ಶಾಲಾ ಸಂಚಾಲಕಿ ಸಿಸ್ಟರ್ ರೇಷ್ಮಾ ಫರ್ನಾಂಡೀಸ್, ಸಿಸ್ಟರ್ ಡಯಾನಾ ರೇಗೋ, ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ ಟಿ.ಚಂದ್ರಶೇಖರ್, ಪಾಲಕರಾದ ಎಚ್.ಎಸ್.ಶಶಿ, ಮುಶ್ರತ್ ಇತರರು ಇದ್ದರು.