ವಿಕ್ರಮ ನಾಡಿಗೇರ ಧಾರವಾಡ
ಜಿಲ್ಲೆಯಲ್ಲಿ ಬೇಲೂರ ಕೈಗಾರಿಕಾ ಪ್ರದೇಶ ಸಾಕಷ್ಟು ಬೆಳೆದಿದೆ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಆದರೆ ಅದಕ್ಕೆ ತಕ್ಕಂತೆ ಸೌಲಭ್ಯಗಳು ಮಾತ್ರವಿಲ್ಲ. ಕೆಲ ಸೌಲಭ್ಯಗಳು ಇದ್ದೂ ಇಲ್ಲದಂತಾಗಿವೆ. ಇದಕ್ಕೆ ಟ್ರಕ್ ಟರ್ಮಿನಲ್ ತಾಜಾ ಉದಾಹರಣೆಯಾಗಿದೆ.
ದೇಶದ ವಿವಿಧ ಮೂಲೆಗಳಿಂದ ಆಗಮಿಸುವ ಸರಕು ಸಾಗಣೆ ಲಾರಿಗಳ ನಿಲುಗಡೆ ಹಾಗೂ ಚಾಲಕ, ಕ್ಲೀನರ್ಗಳ ವಿಶ್ರಾಂತಿಗೆ ಬೇಲೂರ ಕೈಗಾರಿಕೆ ಪ್ರದೇಶದಲ್ಲಿ ಬಹುಕೋಟಿ ವೆಚ್ಚದ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಮಿರ್ಸಲಾಗಿದೆ. ಈ ಟರ್ಮಿನಲ್ ಲಾರಿಗಳ ನಿಲ್ದಾಣದ ಬದಲಿಗೆ ಸಮಸ್ಯೆಗಳ ನಿಲ್ದಾಣವಾಗಿ ಪರಿಣಮಿಸಿದೆ.
ಸುಮಾರು ವರ್ಷಗಳ ಹಿಂದೆ ಟರ್ಮಿನಲ್ ನಿಮಿರ್ಸಲಾಗಿದೆ. ಆರಂಭದಲ್ಲಿ ಎಲ್ಲವೂ ಉತ್ತಮವಾಗಿತ್ತು. ನಂತರ ಎದುರಾದ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ. ಸಂಸದ ಜಗದೀಶ ಶೆಟ್ಟರ್ ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಿಂದಲೂ ಈ ಸಮಸ್ಯೆ ಇದೆ. ಲಾರಿ ಚಾಲಕರು ಮತ್ತು ಕ್ಲೀನರ್ಗಳಿಗೆ ಸೌಲಭ್ಯ ಹಾಗೂ ಸುರಕ್ಷತೆ ಇಲ್ಲ. ಮುಖ್ಯವಾಗಿ ವಿದ್ಯುತ್ ಸಂಪರ್ಕವೇ ಇಲ್ಲ. ಎಲ್ಲ ಸಮಸ್ಯೆಗಳಿಗೂ ಇದೇ ಮೂಲ. ಬೋರ್ ವ್ಯವಸ್ಥೆ ಇದ್ದರೂ ವಿದ್ಯುತ್ ಇಲ್ಲದ ಕಾರಣ ಕುಡಿಯಲು ಹಾಗೂ ಬಳಕೆಗೆ ನೀರಿಲ್ಲದಂತಾಗಿದೆ. ಹೀಗಾಗಿ ವಿಶ್ರಾಂತಿ ಗೃಹಗಳು ಉಪಯೋಗಕ್ಕೆ ಬಾರದಂತಾಗಿವೆ.
ಸುಮಾರು 7 ಎಕರೆ ಜಾಗದಲ್ಲಿ ಅಂದಾಜು 9 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಸ್ಥಾಪಿಸಲಾಗಿದೆ. 150ಕ್ಕೂ ಹೆಚ್ಚು ಲಾರಿಗಳು ನಿಲ್ಲಿಸಬಹುದು. ವಿಶ್ರಾಂತಿ ಗೃಹ, ಸರಕು ಸಾಗಣೆ ಏಜೆನ್ಸಿಯವರಿಗೆ 14 ಕಚೇರಿಗಳಿವೆ. ಮೇಲ್ಮಹಡಿಯಲ್ಲಿ ವಿಶಾಲ ಸಭಾಭವನ, ಕೆಳಮಹಡಿ ಹಾಗೂ ಮೇಲ್ಮಹಡಿ ಸೇರಿ ಒಟ್ಟು 12 ಸ್ನಾನಗೃಹ, ಶೌಚಗೃಹಗಳಿವೆ. ಆದರೆ ನೀರಿಲ್ಲದ ಕಾರಣ ಇವುಗಳು ಉಪಯೋಗಕ್ಕೆ ಬಾರದಂತಾಗಿವೆ. ಹಲವು ವರ್ಷಗಳಿಂದ ವಿಶ್ರಾಂತಿ ಗೃಹ ಬಳಕೆಯಾಗದೆ ಭೂತ ಬಂಗಲೆ ಆಗುತ್ತಿದೆ. ಕೊಠಡಿಗಳಿಗೆ ಹಾಕಿರುವ ಬೀಗ ತುಕ್ಕು ಹಿಡಿಯುತ್ತಿದೆ.
ಟರ್ಮಿನಲ್ ಬಳಿ ಇರುವ ಕ್ಯಾಂಟೀನ್ ಸಹ ಸಂಜೆ 6ರ ಹೊತ್ತಿಗೆ ಬಂದ್ ಆಗಲಿದೆ. ಇದರಿಂದ ಚಾಲಕರು, ಕ್ಲೀನರ್ಗಳು ಊಟ, ಉಪಾಹಾರಕ್ಕೆ ಮುಖ್ಯ ರಸ್ತೆಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ವಿದ್ಯುತ್ ಸಂಪರ್ಕವಿತ್ತು. ಆದರೆ ಬಿಲ್ ಮಾಸಿಕವಾಗಿ 60 ಸಾವಿರ ರೂ. ಮೀರಿ ಬಂದ ಕಾರಣ ಬಿಲ್ ಸರಿಪಡಿಸಿಕೊಡಿಸಲು ಹೆಸ್ಕಾಂಗೆ ಪತ್ರ ಬರೆಯಲಾಗಿತ್ತು. ಆಗ ಕಡಿತಗೊಂಡ ವಿದ್ಯುತ್ ಸಂಪರ್ಕ ಇನ್ನೂ ಬಂದಿಲ್ಲ. ಸೌಲಭ್ಯಗಳು ಇಲ್ಲವೆಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಾರಿಗಳು ಬರುತ್ತಿಲ್ಲ. ಹೀಗಾಗಿ ಆದಾಯ ಕೊರತೆಯಾಗಿ ಎಲ್ಲವೂ ಹೊರೆಯಾಗಿದೆ ಎಂದು ಗುತ್ತಿಗೆದಾರರು ಗೋಳು ತೋಡಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಕೈಗಾರಿಕೆಗಳ ಅಭಿವೃದ್ಧಿಯಾಗಬೇಕಾದರೆ, ಸರಕು ಸಾಗಣೆಯ ಸಾರಥಿಗಳಾಗಿರುವ ಚಾಲಕ, ಪರಿಚಾರಕರಿಗೆ ಒಂದಷ್ಟು ವಿಶ್ರಾಂತಿಗಾದರೂ ಅವಕಾಶ ಮಾಡಿಕೊಡುವತ್ತ ಸರ್ಕಾರ ಮುತುವರ್ಜಿ ವಹಿಸಬೇಕಿದೆ.
ಟೆಂಡರ್ ಪಡೆಯದ ಗುತ್ತಿಗೆದಾರರು: ಈ ಹಿಂದೆ ಸವಣೂರ ಎಂಬುವವರು ಗುತ್ತಿಗೆ ಪಡೆದಿದ್ದರು. ಆದರೆ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗದ ಕಾರಣ ಅವರು ಗುತ್ತಿಗೆ ಮುಂದಿವರೆಸಿರಲಿಲ್ಲ. ಇದೀಗ ಟೆಂಡರ್ ಪಡೆಯಲು ಯಾವ ಗುತ್ತಿಗೆದಾರರೂ ಮುಂದೆ ಬರುತ್ತಿಲ್ಲ. ಹೀಗಾಗಿ ಕೂಡಲೇ ಸಮಸ್ಯೆಗಳನ್ನು ಪರಿಹರಿಸಿ ಮರು ಟೆಂಡರ್ ಕರೆಯಬೇಕಲ್ಲದೆ, ಗುತ್ತಿಗೆದಾರರಿಗೆ ಅನುಕೂಲವಾಗುವಂತಹ ದರ ಸಹ ನಿಗದಿ ಮಾಡಬೇಕಿದೆ.
ಟ್ರಕ್ ಟರ್ಮಿನಲ್ ಸಮಸ್ಯೆ ಪರಿಹರಿಸಲು ಸಾಕಷ್ಟು ಪ್ರಯತ್ನಿಸಲಾಗಿದೆ. ಇದೀಗ ಆ. 12ರಂದು ಟ್ರಕ್ ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ನಿಗದಿ ಮಾಡಲಾಗಿದೆ. ಆ ಸಭೆಯಲ್ಲಿ ಸಮಗ್ರವಾಗಿ ಚಚಿರ್ಸುವ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುವುದು.ಗೈಬುಸಾಬ ಹೊನ್ಯಾಳ, ಡಿ. ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಮಾಜಿ ನಿರ್ದೇಶಕ